ಬೆಂಗಳೂರು: ರಾಜ್ಯ ಸರಕಾರ ಕಾಟಾಚಾರಕ್ಕೆ ಬೆಳಗಾವಿ ಅಧಿವೇಶನ ನಡೆಸುತ್ತಿದೆ. ಅದು 8 ದಿನಕ್ಕಿಂತ ಹೆಚ್ಚು ಕಾಲ ನಡೆಯಲಾರದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯು ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಇಂದು ನಡೆಯಿತು.ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹಾಲಿ ಶಾಸಕರು ಮೃತಪಟ್ಟ ಕಾರಣ ಒಂದು ದಿನ ನಡೆಯಲಾರದು; ಆಡಳಿತ ಪಕ್ಷ ಕಾಂಗ್ರೆಸ್ ತನ್ನ ಮರ್ಜಿಗೋಸ್ಕರ, ಮಸೂದೆ ಅಂಗೀಕಾರಕ್ಕೆ ಈ ಅಧಿವೇಶನವನ್ನು ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಬೆಂಗಳೂರು ಅಭಿವೃದ್ಧಿ, ಬೆಂಗಳೂರು ಪಾಲಿಕೆ- ಈ ಥರದ ವಿಚಾರಗಳನ್ನು ತಂದಿದ್ದಾರೆ ಎಂದರು. ಬೆಂಗಳೂರಿನ ವಿಚಾರಗಳನ್ನೇ ಕೈಗೆತ್ತಿಕೊಳ್ಳುವುದಾದರೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ಔಚಿತ್ಯ ಏನು ಎಂದು ಕೇಳಿದರು.
ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಅವರಿದ್ದಾಗ ಅಲ್ಲೊಂದು ಭವನ ಆಗಬೇಕು; ಉತ್ತರ ಕರ್ನಾಟಕದ ಚರ್ಚೆ ಆಗಬೇಕೆಂದು ಅಧಿವೇಶನ ಮಾಡುತ್ತಿದ್ದರು. 20 ದಿನವಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ; ಅಲ್ಲಿನ ಸಮಸ್ಯೆಗಳನ್ನು ಚರ್ಚಿಸಿ ಎಂದು ಆಗ್ರಹಿಸಿದರು.




