Ad imageAd image

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಏನಿಗದಲೆ ಗ್ರಾ.ಪಂ. ಆಯ್ಕೆ: ಮಾದರಿ ಆಡಳಿತಕ್ಕೆ ರಾಜ್ಯಮಟ್ಟದ ಮನ್ನಣೆ

Bharath Vaibhav
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಏನಿಗದಲೆ ಗ್ರಾ.ಪಂ. ಆಯ್ಕೆ: ಮಾದರಿ ಆಡಳಿತಕ್ಕೆ ರಾಜ್ಯಮಟ್ಟದ ಮನ್ನಣೆ
WhatsApp Group Join Now
Telegram Group Join Now

ಚೇಳೂರು:2023-24 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಸಾಲಿನ ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರಕ್ಕೆ ನೂತನ ಚೇಳೂರು ತಾಲ್ಲೂಕಿನ ಏನಿಗದಲೆ ಗ್ರಾಮ ಪಂಚಾಯಿತಿ ಆಯ್ಕೆಯಾಗುವ ಮೂಲಕ ಇಡೀ ತಾಲೂಕಿಗೆ ಕೀರ್ತಿ ತಂದಿದೆ.

ಪಂಚಾಯತ್ ರಾಜ್ ಇಲಾಖೆ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗೆ ಯೇನಿಗದಲೆ ಗ್ರಾ.ಪಂ.ನ ಸಮಗ್ರ ಅಭಿವೃದ್ಧಿ, ಸ್ವಚ್ಛತೆ, ಮತ್ತು ಸರ್ಕಾರದ ಯೋಜನೆಗಳಾದ ಸ್ವಚ್ಛ ಭಾರತ್ ಮಿಷನ್, ನರೇಗಾ ಹಾಗೂ ಜಲ ಜೀವನ್ ಮಿಷನ್‌ಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕಾರ್ಯಕ್ಷಮತೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.

ಉತ್ತಮ ಆಡಳಿತ, ಪಾರದರ್ಶಕ ಕಡತ ನಿರ್ವಹಣೆ ಮತ್ತು ಜನಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳುವ ಮೂಲಕ ಗ್ರಾ.ಪಂ. ರಾಜ್ಯಮಟ್ಟದಲ್ಲಿ ಗಮನ ಸೆಳೆದಿತ್ತು.

ಬೆಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಗ್ರಾಮ ಪಂಚಾಯಿತಿಯ ಪರವಾಗಿ ಅಧ್ಯಕ್ಷರಾದ ಶಿವಮ್ಮ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶೈಲಜಾ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಮಾಹಿತಿ ತಂತ್ರಜ್ಞಾನ (ಐಟಿ), ಜೈವಿಕ ತಂತ್ರಜ್ಞಾನ (ಬಿಟಿ) ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಗೌರವಪೂರ್ವಕವಾಗಿ ಪ್ರಶಸ್ತಿ ಫಲಕವನ್ನು ನೀಡಿ ಸನ್ಮಾನಿಸಿ, ಏನಿಗದಲೆ ಗ್ರಾ.ಪಂ.ನ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ತಾಲೂಕಿನಾದ್ಯಂತ ಏನಿಗದಲೆ ಗ್ರಾ.ಪಂ.ನ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಏನಿಗದಲೆ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದು ನೂತನ ಚೇಳೂರು ತಾಲೂಕಿಗೆ ಹೆಮ್ಮೆಯ ವಿಷಯ. ಇದು ಇಡೀ ತಾಲೂಕಿನ ಇತರ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿದ್ದು, ಅವರ ಕಾರ್ಯನಿರ್ವಹಣೆ ಮತ್ತು ಪಾರದರ್ಶಕತೆಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ. ಉತ್ತಮ ಆಡಳಿತ ನೀಡಿದ ಅಧ್ಯಕ್ಷರು, ಪಿಡಿಒ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
– ಜಿವಿ ರಮೇಶ್. ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ, ಬಾಗೇಪಲ್ಲಿ.

 

ಇದು ನಮ್ಮ ತಂಡದ ಶ್ರಮಕ್ಕೆ ಮತ್ತು ಅಧಿಕಾರಿಗಳ ಸಮರ್ಥ ಮಾರ್ಗದರ್ಶನಕ್ಕೆ ಸಿಕ್ಕ ಮನ್ನಣೆ. ಈ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡಲು ಸ್ಫೂರ್ತಿ ನೀಡಿದೆ.
– ಶೈಲಜಾ ಪಿಡಿಓ, ಏನಿಗದಲೆ ಗ್ರಾಮ ಪಂಚಾಯಿತಿ

 

ಗಾಂಧಿ ಗ್ರಾಮ ಪುರಸ್ಕಾರಕ್ಕೆ ನಮ್ಮ ಏನಿಗದಲೆ ಗ್ರಾಮ ಪಂಚಾಯಿತಿ ಆಯ್ಕೆಯಾಗಿದ್ದು ನಮಗೆ ಅತ್ಯಂತ ಹೆಮ್ಮೆಯ ವಿಷಯ. ಈ ಸಾಧನೆಗೆ ನಮ್ಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸದಸ್ಯರು ಮತ್ತು ಪ್ರೀತಿಯ ಗ್ರಾಮಸ್ಥರ ಸಂಪೂರ್ಣ ಸಹಕಾರವೇ ಕಾರಣ. ಈ ಪ್ರಶಸ್ತಿಯು ನಮಗೆ ಮುಂದೆಯೂ ಇದೇ ಹುಮ್ಮಸ್ಸಿನಿಂದ ಜನಪರ ಮತ್ತು ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲು ಪ್ರೇರಣೆ ನೀಡುತ್ತದೆ.
– ಶಿವಮ್ಮ ಅಧ್ಯಕ್ಷರು,ಏನಿಗದಲೆ ಗ್ರಾಮ ಪಂಚಾಯಿತಿ.

ವರದಿ : ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!