ತುರುವೇಕೆರೆ : ತುಮಕೂರು ಜಿಲ್ಲಾಸ್ಪತ್ರೆಯನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ತುಮಕೂರು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ, ತುರುವೇಕೆರೆ ತಾಲೂಕು ಸಂಘದ ಅಧ್ಯಕ್ಷ ಎಂ.ನರಸಿಂಹಮೂರ್ತಿ (ಅಭಿನೇತ್ರಿ) ಒತ್ತಾಯಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತನ್ನದೇ ಆದ ಇತಿಹಾಸವಿದೆ. ಏಳೆಂಟು ದಶಕಗಳಿಂದ ಜಿಲ್ಲೆಯ ಹತ್ತು ತಾಲ್ಲೂಕುಗಳ ನಾಗರೀಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಬಡವರು, ಕೂಲಿಕಾರ್ಮಿಕರು, ಕಡುಬಡವ ವರ್ಗದವರಿಗೆ ಹೆಚ್ಚಿನ ಆರೋಗ್ಯ ಸೇವೆ ಪಡೆಯಲು ಇರುವ ಏಕೈಕ ಆಶಾಕಿರಣ ತುಮಕೂರು ಜಿಲ್ಲಾಸ್ಪತ್ರೆಯಾಗಿದೆ. ಬಡವರ ಆಶಾಕಿರಣವಾದ ಆಸ್ಪತ್ರೆಯನ್ನು ಸರ್ಕಾರ ಖಾಸಗೀಕರಣಗೊಳಿಸಿ ಬಂಡವಾಳಶಾಹಿಗಳ ಕೈಗೆ ಆಸ್ಪತ್ರೆ ನೀಡಿ ಬಡವರನ್ನು ಆರೋಗ್ಯದ ಹೆಸರಿನಲ್ಲಿ ಸುಲಿಗೆ ಮಾಡಲು ಯತ್ನಿಸುತ್ತಿರುವುದು ಬಹಳ ಶೋಚನೀಯ ಸಂಗತಿಯಾಗಿದೆ ಎಂದರು.
ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೊರಟಗೆರೆ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ಪಡೆದ ನಾಗರೀಕರು ಎಕ್ಸ್ ರೇ, ಎಂ.ಆರ್.ಐ, ಸಿಟಿ ಸ್ಕ್ಯಾನ್, ಡಯಾಲಿಸಿಸ್, ಆಪರೇಷನ್ ಗಳು ಮುಂತಾದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಸಾವಿರದಿಂದ ಲಕ್ಷಾಂತರ ರೂ ಹಣ ವ್ಯಯಿಸಬೇಕಿದೆ. ದುಬಾರಿ ಚಿಕಿತ್ಸಾ ವೆಚ್ಚ ಭರಿಸಲಾಗದ ಬಡವರು, ಕೂಲಿಕಾರರು, ಮಧ್ಯಮ ವರ್ಗದ ಜನತೆ ಚಿಕಿತ್ಸೆ ಪಡೆಯಲಾಗದೆ ಅನಾರೋಗ್ಯದಿಂದ ಬಳಲಿ ಕುಟುಂಬವನ್ನು ಅನಾಥರನ್ನಾಗಿ ಮಾಡಿ ಅಕಾಲಮೃತ್ಯುವಿಗೆ ಬಲಿಯಾಗುತ್ತಾರೆ. ಆದರೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರದ ಸೌಲಭ್ಯಗಳು ದೊರೆಯುವುದರಿಂದ ಉಚಿತವಾಗಿ ಚಿಕಿತ್ಸೆಯನ್ನು ಪಡೆದು ಆರೋಗ್ಯವಂತರಾಗುವುದರ ಜೊತೆಗೆ ಕುಟುಂಬ ಅನಾಥರಾಗುವುದು ತಪ್ಪುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದರು.
ಸರ್ಕಾರ ಉದ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ಸಣ್ಣಪುಟ್ಟ ಜನರಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ತೆರಿಗೆ ವಸೂಲಿ ಮಾಡುತ್ತಿದೆ. ತೆರಿಗೆ ಹಣ ಈ ರೀತಿಯ ಆರೋಗ್ಯ, ವಿದ್ಯಾದಾನ, ಮೂಲಸೌಕರ್ಯದಂತಹ ಸೌಲಭ್ಯಗಳಿಗೆ ಬಳಕೆಯಾಗಬೇಕಿದೆ. ಈಗಾಗಲೇ ಸರ್ಕಾರ ಶಾಲೆ, ಕಾಲೇಜುಗಳನ್ನು ಖಾಸಗಿಯವರಿಗೆ ಹೆಚ್ಚಿನ ರೀತಿಯಲ್ಲಿ ಮಂಜೂರು ಮಾಡಿ ವಿದ್ಯೆ ಎಂಬುದು ದಾನವಾಗಿ ಉಳಿಯದೆ ಹಣ ಮಾಡುವ ಉದ್ಯಮವಾಗಿ ಬೆಳೆದು ನಿಂತಿದೆ. ಇದೇ ರೀತಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಿದರೆ ಆರೋಗ್ಯವೂ ಸೇವೆಯ ಬದಲಾಗಿ ಹಣ ಸಂಪಾದಿಸುವ, ಬಡವರನ್ನು ಆರೋಗ್ಯದ ಹೆಸರಿನಲ್ಲಿ ಶೋಷಿಸುವ ಮಾರ್ಗವಾಗಿ ಬದಲಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ತುಮಕೂರು ಜಿಲ್ಲಾಸ್ಪತ್ರೆಯನ್ನು ಖಾಸಗೀಕರಣ ಮಾಡುವ ತನ್ನ ಕೆಟ್ಟ ನಿರ್ಧಾರವನ್ನು ಕೈಬಿಟ್ಟು, ಇನ್ನೂ ಹೆಚ್ಚಿನ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಬಡವರು ಸೇರಿದಂತೆ ಎಲ್ಲಾ ನಾಗರೀಕರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುವಂತೆ ಮಾಡಬೇಕೆಂದು ಆಗ್ರಹಿಸಿದರು.
ತುಮಕೂರು ಜಿಲ್ಲಾಸ್ಪತ್ರೆಯನ್ನು ಖಾಸಗೀಕರಣ ಮಾಡುವ ತನ್ನ ನಿಲುವನ್ನು ಸರ್ಕಾರ ಬದಲಾಯಿಸದಿದ್ದರೆ ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘವು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ನಾಗರೀಕರೊಡಗೂಡಿ ತುಮಕೂರು ಜಿಲ್ಲಾಕೇಂದ್ರದಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ವರದಿ : ಗಿರೀಶ್ ಕೆ ಭಟ್




