ತುರುವೇಕೆರೆ: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ತುರುವೇಕೆರೆ ತಾಲ್ಲೂಕು ಪತ್ರಬರಹಗಾರರ ಸಂಘ ಡಿಸೆಂಬರ್ 15 ಮತ್ತು 16 ರಂದು ಲೇಖನಿ ಸ್ಥಗಿತ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 16 ರಂದು ಬೆಳಗಾವಿ ಚಲೋ ನಡೆಸಿ, ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪತ್ರಬರಹಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ (ಪಾಪು) ತಿಳಿಸಿದರು.
ತುರುವೇಕೆರೆ ತಾಲ್ಲೂಕು ಕಛೇರಿಯಲ್ಲಿ ತಹಸೀಲ್ದಾರ್ ಕುಂ.ಇ. ಅಹಮದ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 16 ಸಾವಿರ ಪತ್ರಬರಹಗಾರರು ಇದ್ದು, ಇವರೊಂದಿಗೆ ಸಹಾಯಕರು, ಕಂಪ್ಯೂಟರ್ ಆಪರೇಟರ್ ಗಳು ಸೇರಿದಂತೆ ಇವರನ್ನೇ ನಂಬಿರುವ ಕುಟುಂಬಗಳೂ ಸಹ ಜೀವನ ನಡೆಸುತ್ತಿವೆ. ಸರ್ಕಾರ ಜಾರಿಗೆ ತಂದಿರುವ ಹತ್ತು ಹಲವು ಕಾನೂನುಗಳು ಪತ್ರಬರಹಗಾರರನ್ನು ಧೃತಿಗೆಡಿಸಿದೆ. ಸರ್ಕಾರ ಫೇಸ್ ಲೆಸ್ ಹಾಗೂ ಪೇಪರ್ ಲೆಸ್ ತಂತ್ರಾಶವನ್ನು ಜಾರಿಗೆ ತರುವ ಮುನ್ಸೂಚನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದ್ದು, ಈ ತತ್ರಾಂಶ ಜಾರಿಗೆ ಬಂದಲ್ಲಿ ನಾಗರೀಕರು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಹ ಘೋರ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಇಂತಹ ನಾಗರೀಕರ ಅಸ್ತಿತ್ವಕ್ಕೆ ಧಕ್ಕೆಯುಂಟು ಮಾಡುವ ಹಾಗೂ ಪತ್ರಬರಹಗಾರರ ಜೀವನವನ್ನೇ ದುಸ್ಥರಗೊಳಿಸುವ ಕಾನೂನುಗಳನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿದರು.

ಸರ್ಕಾರ ಜಾರಿಗೊಳಿಸಿರುವ ಕಾವೇರಿ 2.0 ತತ್ರಾಂಶ ಪತ್ರಬರಹಗಾರರ ಪಾಲಿಗೆ ಮರಣಶಾಸನವಾಗಿದೆ. ಕಾವೇರಿ 2.0 ನಲ್ಲಿ ಸಿಟಿಜನ್ ಲಾಗಿನ್ ನೀಡಿರುವುದರಿಂದ ಜನರಿಗೆ ಅನುಕೂಲವಾಗುವ ಬದಲು ತೊಂದರೆಯೇ ಜಾಸ್ತಿಯಾಗಿದೆ. ಸಿಟಿಜನ್ ಲಾಗಿನ್ ಹೆಚ್ಚು ದುರುಪಯೋಗವಾಗುತ್ತಿರುವುದಲ್ಲದೆ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅನಧಿಕೃತ ವ್ಯಕ್ತಿಗಳ ಹಾವಳಿ ಅತಿಯಾಗಿದೆ. ವೃತ್ತಿನಿರತರಲ್ಲದೇ ಹಲವಾರು ಮಂದಿ ನೋಂದಣಿ ಮಾಡಿಸುವ ಭರವಸೆ ನೀಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ. ಡಿಟಿಪಿ ಸೆಂಟರ್, ಸೈಬರ್ ಕೇಂದ್ರದವರು ನೋಂದಣಿ ಮಾಡಿಸುವುದಾಗಿ ಬೋರ್ಡುಗಳನ್ನು ಹಾಕಿಕೊಂಡು ಜನರಿಗೆ ಮೋಸಮಾಡುತ್ತಾ ಕಾನೂನು ಬಾಹಿರವಾಗಿ, ಅವೈಜ್ಞಾನಿಕವಾಗಿ ಪತ್ರಗಳನ್ನು ತಯಾರಿಸಿಕೊಡುತ್ತಿದ್ದಾರೆ. ಇದರಿಂದ ಅಧಿಕೃತ ಪತ್ರಬರಹಗಾರರ ಪರವಾನಗಿ ಪಡೆದವರ ಉದ್ಯೋಗ ಭದ್ರತೆಗೆ ಧಕ್ಕೆಯುಂಟಾಗುತ್ತಿದೆ ಎಂದು ಕಿಡಿಕಾರಿದರು.
ಡಿಸೆಂಬರ್ 16 ರಂದು ರಾಜ್ಯದ ಎಲ್ಲಾ ಪತ್ರ ಬರಹಗಾರರು ಬೆಳಗಾವಿಯಲ್ಲಿ ಬೃಹತ್ ಮಟ್ಟದಲ್ಲಿ “ಬೆಳಗಾವಿಯಿಂದ ಸುವರ್ಣ ಸೌಧ”ದವರೆಗೆ ಬೆಳಗಾವಿ ಚಲೋ ನಡೆಸಿ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಭೇಟಿ ಮಾಡಿ ಹೊರರಾಜ್ಯದಲ್ಲಿ ಚಾಲ್ತಿಯಲ್ಲಿರುವಂತೆ ಕರ್ನಾಟಕ ರಾಜ್ಯದ ಎಲ್ಲಾ ಪತ್ರ ಬರಹಗಾರರಿಗೆ ಪತ್ರೇಕ ಲಾಗಿನ್ ನೀಡುವುದು, ನೋಂದಣಿಯಾಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರು ಅಥವಾ ವಕೀಲರ ಸಹಿ (ಬಿಕ್ಲಂ) ಹಾಗೂ ಮೊಹರು, ಪರವಾನಗಿ / ಬಾರ್ ಕೌನ್ಸಿಲ್ ಸಂಖ್ಯೆ ನಮೂದುವಿನೊಂದಿಗೆ ಕಡ್ಡಾಯಗೊಳಿಸುವುದು, ರಾಜ್ಯದ ಎಲ್ಲಾ ಪತ್ರಬರಹಗಾರರಿಗೆ ಸರ್ಕಾರ ಮಾನ್ಯತೆ ಇರುವ ಏಕ ರೂಪದ ಅಧಿಕೃತ ಗುರುತಿನ ಚೀಟಿಯನ್ನು ನೀಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪನೋಂದಣಾಧಿಕಾರಿಗಳ ಮೂಲಕ ನೋಂದಣಿ ಮಹಾಪರೀವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಪತ್ರ ಬರಹಾರರ ಲೇಖನಿ ಸ್ಥಗಿತ ಹಿನ್ನೆಲೆ ಉಪನೋಂದಣಾಧಿಕಾರಿಗಳ ಕಛೇರಿ ಬಿಕೋ ಎನ್ನುತ್ತಿತ್ತು. ಈ ಸಂದರ್ಭದಲ್ಲಿ ತಾಲೂಕು ಪತ್ರ ಬರಹಗಾರರ ಸಂಘದ ಗೌರವಾಧ್ಯಕ್ಷ ಕೆ.ಎಲ್. ಶಿವಕುಮಾರ್, ಅಧ್ಯಕ್ಷ ಕೆ.ಆರ್.ರಮೇಶ್, ಉಪಾಧ್ಯಕ್ಷ ಶಿವಕುಮಾರ್, ಪರಮೇಶ್, ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಖಜಾಂಚಿ ಶಿವಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿ ಹರೀಶ್, ನಿರ್ದೇಶಕರಾದ ಗೋಪಿನಾಥ, ಬಿ.ಎನ್.ಶಶಿಕುಮಾರ್, ಕಲ್ಲೇಶ್, ಕಂಚಿರಾಯ, ಬಸವರಾಜು, ಬಲರಾಮಯ್ಯ, ಶಿವಕುಮಾರ್, ಶಿವಣ್ಣ, ಪುಟ್ಟರಾಮಯ್ಯ, ಪತ್ರ ಬರಹಗಾರರಾದ ಜಗದೀಶ್, ಕಾಚಿಹಳ್ಳಿ ನವೀನ್ ಕುಮಾರ್, ಕಂಚೀಪತಿ, ಸ್ವರ್ಣಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




