ಬೆಳಗಾವಿ : ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುತ್ತಿರುವ ಫಲಾನುಭವಿಗಳ ಪೈಕಿ 1.80 ಲಕ್ಷ ಮಂದಿ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ವಿಧಾನ ಪರಿಷತ್ ನಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಇಲಾಖೆಯ ಅಧಿಕಾರಿಗಳು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.
ಕುಟುಂಬದ ಯಜಮಾನನಿಗೆ ಪ್ರತಿ ತಿಂಗಳು ತಲಾ 2,000 ರೂ. ನಂತೆ 2023ರ ಜೂನ್ 6ರಿಂದ ಗೃಹಲಕ್ಷ್ಮಿ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ.
ಅಕ್ಟೋಬರ್ ಅಂತ್ಯಕ್ಕೆ 1.28 ಕೋಟಿ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಅರ್ಹ 1.24 ಕೋಟಿ ಮಹಿಳೆಯರಿಗೆ ಆಗಸ್ಟ್ ಅಂತ್ಯದವರೆಗೆ 22 ಕಂತಿನಲ್ಲಿ ಹಣ ಪಾವತಿಸಲಾಗಿದೆ. ಒಟ್ಟಾರೆ 52,416 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.
ಸರ್ಕಾರದ ಮಾನದಂಡದ ಅನ್ವಯ ಕುಟುಂಬದ ಯಜಮಾನಿ ಅಥವಾ ಅವರ ಪತಿಯ ಐಟಿ ಅಥವಾ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ ಅಂತವರು ಯೋಜನೆಯ ಫಲಾನುಭವಿಗಳಾಗಲು ಅರ್ಹರಲ್ಲ ಎಂದು ತಿಳಿಸಲಾಗಿದೆ.




