Ad imageAd image

6 ಸಾವಿರ ಕೋಟಿ ರೂಪಾಯಿಯಿಂದ 10 ಸಾವಿರ ಕೋಟಿಗೆ ಏರಿಕೆ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೊಲ್ಲೆ ಸಂಕಲ್ಪ

Bharath Vaibhav
6 ಸಾವಿರ ಕೋಟಿ ರೂಪಾಯಿಯಿಂದ 10 ಸಾವಿರ ಕೋಟಿಗೆ ಏರಿಕೆ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೊಲ್ಲೆ ಸಂಕಲ್ಪ
WhatsApp Group Join Now
Telegram Group Join Now

ಬೆಳಗಾವಿ ಜಿಲ್ಲೆಯ ಎಲ್ಲ ಪಿಕೆಪಿಎಸ್ ಸಂಘಗಳ ಕಾರ್ಯನಿರ್ವಾಹಕರ ಸಭೆಯಲ್ಲಿ ಜೊಲ್ಲೆ ಹೇಳಿಕೆ

ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ‌ ಅಭಿವೃದ್ಧಿಗೆ ಹಲವಾರು ರೈತಪರ ಯೋಜನೆಗಳನ್ನು ರೂಪಿಸಲು ಉದ್ದೇಶಿಸಿದ್ದು, ಈಗಿರುವ 6 ಸಾವಿರ ಕೋಟಿ ರೂಪಾಯಿ ಠೇವಣಿಯನ್ನು ಮುಂದಿನ ದಿನಗಳಲ್ಲಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿವರೆಗೆ ಹೆಚ್ಚಿಸಲು ಉದ್ದೇಶ ಹೊಂದಿರುವುದಾಗಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಹೇಳಿದರು.

ಸೋಮವಾರ, ನಗರದ ಧರ್ಮನಾಥ ಭವನದಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆಸಿದ ಸೌಹಾರ್ದಯುತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಹೆಮ್ಮೆಯ ಬ್ಯಾಂಕನ್ನು ರಾಜ್ಯದಲ್ಲಿಯೇ ಮಾದರಿ ಮಾಡುವ ಸಂಕಲ್ಪವನ್ನು ನಾವೆಲ್ಲರೂ ಇಟ್ಟುಕೊಂಡಿದ್ದು, ಅದಕ್ಕೆ ತಮ್ಮೆಲ್ಲರ ಸಹಾಯ- ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಬೆಮುಲ್ ಅಧ್ಯಕ್ಷ, ಹಿರಿಯ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಸಮರ್ಥ ಮುಂದಾಳತ್ವದಲ್ಲಿ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಕಂಕಣಬದ್ದರಾಗಿ ಶ್ರಮಿಸುತ್ತೇವೆ. ಪ್ರತಿ ಕೆಲಸ- ಕಾರ್ಯಗಳಲ್ಲಿ ಬ್ಯಾಂಕಿನ ನಿರ್ದೇಶಕರು ಮತ್ತು ಸಹಕಾರಿ ಸಂಘಗಳ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುವುದು. ರೈತರ ಸ್ವಾವಲಂಬಿ ಬದುಕಿಗೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸಲು ಉದ್ದೇಶಿಸಿದ್ದೇವೆ. ಸಹಕಾರ ತತ್ವ ದಡಿ ಎಲ್ಲರೂ ಪಕ್ಷ ಬೇಧ ಮರೆತು ಒಂದಾಗಿ ದುಡಿಯುತ್ತೇವೆ. ರೈತಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂದು ಹೇಳಿದರು.

ಸಂಘಗಳ ಆಡಳಿತ ಮಂಡಳಿ, ಸಿಬ್ಬಂದಿ ಮಧ್ಯ ಉತ್ತಮ ಹೊಂದಾಣಿಕೆ ಇರಬೇಕು. ಅಂದಾಗ ಮಾತ್ರ ಸಂಘಗಳು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತವೆ. ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ರೈತರೊಂದಿಗೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಸಂಘಗಳು ಬೆಳೆಯಲಿಕ್ಕೆ ಅನುಕೂಲವಾಗುತ್ತವೆ ಎಂದು ಹೇಳಿದರು. ಬ್ಯಾಂಕಿನ ಅಧೀನದಲ್ಲಿ

ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯಗಳನ್ನು ಮಾಡಿಸುವ ಕ್ರಮ ಕೈಕೊಳ್ಳಲಾಗಿದೆ. ಬ್ಯಾಂಕಿನ ನಿರ್ದೇಶಕರೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಅವರು ಸಹ ಈ ವಿನೂತನ ಕಾರ್ಯಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ. ಅಪಘಾತ, ಸಹಜ ಸಾವು ಮತ್ತು ಆರೋಗ್ಯ ವಿಮೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದೇವೆ. ತಲಾ 5 ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ ಮತ್ತು ಸಹಜ ಸಾವು ವಿಮೆ ಹಾಗೂ ರೂಪಾಯಿ ಒಂದು ಲಕ್ಷವರೆಗಿನ ಆರೋಗ್ಯ ವಿಮೆಯನ್ನು ಜಾರಿ ಮಾಡಲು ಯೋಚಿಸಿದ್ದೇವೆ. ಸೊಸೈಟಿಗಳ ಸಿಬ್ಬಂದಿಗಳು ಈ ವ್ಯಾಪ್ತಿಗೆ ಒಳಪಡಲಿದ್ದು, ಸುಮಾರು 3 ಸಾವಿರ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ. ಇದಕ್ಕಾಗಿ ಡಿಸಿಸಿ ಬ್ಯಾಂಕ್ ಶೇ. 40 ರಷ್ಟು ಹಣವನ್ನು ಹೂಡಲಿದ್ದು, ಮಿಕ್ಕ ಶೇ. 60 ರಷ್ಟನ್ನು ಹಣವನ್ನು ಸೊಸೈಟಿಗಳು ಶೇ. 30 ಮತ್ತು ಶೇ. 30 ರಷ್ಟು ಸೊಸೈಟಿ ಸಿಬ್ಬಂದಿಯವರು ಭರಿಸಬೇಕೆಂದು ಜೊಲ್ಲೆ ಹೇಳಿದರು.
ವೇದಿಕೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಾದ ಅಪ್ಪಾಸಾಹೇಬ ಕುಲಗೋಡೆ, ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ನೀಲಕಂಠ ಕಪ್ಪಲಗುದ್ದಿ, ರಾಹುಲ್ ಜಾರಕಿಹೊಳಿ, ನಾನಾಸಾಹೇಬ ಪಾಟೀಲ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಕಲಾವಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಮುರಗೋಡ ಮಹಾಂತಜ್ಜನವರ ಆಶೀರ್ವಾದದಿಂದ ಬೆಳಗಾವಿ ಡಿಸಿಸಿ ಬ್ಯಾಂಕ್ ಶತಮಾನದ ಸಂಭ್ರಮದಲ್ಲಿದೆ. ಶತ ಸಂಭ್ರಮವನ್ನು ಅತೀ ಅದ್ದೂರಿಯಿಂದ ಆಚರಿಸಲು ಯೋಜನೆಗಳನ್ನು ಹಾಕಿಕೊಂಡಿವೆ. ಇಂತಹ ಸಂದರ್ಭದಲ್ಲಿ ಬ್ಯಾಂಕಿಗೆ ಅಣ್ಣಾಸಾಹೇಬ ಜೊಲ್ಲೆಯಂತಹ ನುರಿತ ಅಧ್ಯಕ್ಷರು ಸಿಕ್ಕಿರುವುದು ಎಲ್ಲರ ಸುದೈವ. ಬ್ಯಾಂಕಿಂಗ್ ಸೇವೆಯಲ್ಲಿ ಅಪಾರ ಅನುಭವವಿರುವ ಜೊಲ್ಲೆಯವರ ಮುಂದಾಳುತನದಲ್ಲಿ ನಮ್ಮ ‌ಡಿಸಿಸಿ ಬ್ಯಾಂಕ್ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡಿ ಜನರ ಮನಸ್ಸನ್ನು ಗೆಲ್ಲುವ ವಿಶ್ವಾಸವಿದೆ. ಸಹಕಾರ ಸಂಘಗಳ ಸದಸ್ಯರು, ಸಿಬ್ಬಂದಿಯವರು ಪ್ರಾಮಾಣಿಕವಾಗಿ ದುಡಿದರೆ ಮಾತ್ರ ಸಂಘಗಳು ಬಲವರ್ಧನೆಯಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರೈತರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಡಿಸಿಸಿ ಬ್ಯಾಂಕು ಮುಂದಿನ ದಿನಗಳಲ್ಲಿ ರೈತ ಸ್ನೇಹಿ ಯೋಜನೆಗಳನ್ನು ಅನುಷ್ಟಾನ ಮಾಡುವ ಸಂಕಲ್ಪ ನಮಗಿದೆ. — ಬಾಲಚಂದ್ರ ಜಾರಕಿಹೊಳಿ-ಶಾಸಕರು, ಅಧ್ಯಕ್ಷರು ಬೆಮುಲ್ ಬೆಳಗಾವಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!