ಬೆಳಗಾವಿ: ಗೃಹ ಲಕ್ಷ್ಮೀ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಸಮರ್ಪಕವಾಗಿ ಜಮೆಯಾಗದಿರುವ ಹಿನ್ನೆಲೆಯಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸಚಿವರು ಸದನಕ್ಕೆ ಬಂದು ಉತ್ತರಿಸುವಂತೆ ಪಟ್ಟು ಹಿಡಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಗೃಹಲಕ್ಷ್ಮೀ ಯೋಜನೆ ಹಣ ಜಮಾ ಬಗ್ಗೆ ಸರ್ಕಾರದಿಂದ ಸದನಕ್ಕೆ ತಪ್ಪು ಮಾಹಿತಿ ವಿಚಾರ ಪ್ರತಿಧ್ವನಿಸಿದ್ದು, ವಿಧಾನಸಭೆಯಲ್ಲಿ ಗದ್ದಲ ಕೋಲಾಹಕ್ಕೆ ಕಾರಣವಾಯಿತು.
ಕೆಲ ತಿಂಗಳಿಂದ ಗೃಹಲಕ್ಷ್ಮೀ ಹಣ ಫಲಾನುಭವಿಗಳಿಗೆ ಪಾವತಿಯಾಗುತ್ತಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಹಣ ಜಮೆಯಾಗಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. 1 ಕೋಟಿ 26 ಲಕ್ಷ ಗೃಹಲಕ್ಷ್ಮೀ ಮಹಿಳೆಯರಿಗೆ ಅನ್ಯಾಯವಾಗಿದೆ.
ಸಾವಿರಾರು ಕೋಟಿ ಬಾಕಿ ಹಣ ಎಲ್ಲಿಗೆ ಹೋಯಿತು? ಗೃಹಲಕ್ಷ್ಮೀ ಹಣ ಖಾತೆಗೆ ಜಮೆಯಾಗದಿರುವುದಕ್ಕೆ ಕಾರಣವೇನು? ಎಂಬುದನ್ನು ಸದನಲ್ಲಿ ಸ್ಪಷ್ಟಪಡಿಸಬೇಕು. ಸ್ವತಃ ಸಚಿವೆ ಸದನಕ್ಕೆ ಬಂದು ಉತ್ತರಿಸಲಿ ಎಂದು ಆಗ್ರಹಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯದ ವಿಚಾರದಲ್ಲಿ ಸ್ವಲ್ಪ ಗೊಂದಲಗಳಾಗಿವೆ.
ಆಗಸ್ಟ್ ತಿಂಗಳವರೆಗೆ ಹಣ ಜಮೆಯಾಗಿದೆ ಎಂದು ಅಧಿಕಾರಿಗಳು ಮೊದಲು ಮಾಹಿತಿ ನೀಡಿದ್ದರು. ಆದರೆ ಈ ಬಗ್ಗೆ ಪರಿಶೀಲಿಸಿದಾಗ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನ ಹಣ ಜಮೆಯಾಗಿಲ್ಲ ಎಂಬುದು ತಿಳಿದುಬಂದಿದೆ.
ಎರಡು ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಸದನಕ್ಕೆ ತಪ್ಪು ಮಾಹಿತಿ ರವಾನೆ ಮಾಡಬೇಕು ಎಂಬ ಉದ್ದೇಶ ನನಗಿರಲಿಲ್ಲ. ಆದರೆ ನಮ್ಮಿಂದ ತಪ್ಪಾಗಿದೆ.
ಯಾರ ಭಾವನೆಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು. ಸಿಎಂ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಫೆಬ್ರವರಿ ಹಗೂ ಮಾರ್ಚ್ ತಿಂಗಳ ಹಣ ಶೀಘ್ರ ಜಮೆಯಾಗುವಂತೆ ಸರಿಪಡಿಸುತ್ತೇವೆ ಎಂದು ತಿಳಿಸಿದರು.




