ಬಾಗಲಕೋಟೆ: ವಿಶೇಷ ಚೇತನ ಮಕ್ಕಳ ವಸತಿ ಶಾಲೆಯಲ್ಲಿ ಶಿಕ್ಷಕ ದಂಪತಿ ಬುದ್ಧಿಮಾಂದ್ಯ ಮಕ್ಕಳ ಮೇಲೆ ಕ್ರೌರ್ಯ ಮೆರೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆಯ ನವನಗರದಲ್ಲಿರುವ ವಿಶೇಷ ಚೇತನ ಮಕ್ಕಳ ವಸತಿ ಶಾಲೆಯಲ್ಲಿ ಶಿಕ್ಷಕ ದಂಪತಿ ಅಕ್ಷಯ್ ಹಾಗೂ ಪತ್ನಿ ಮಾಲಿನಿ ಎಂಬುವವರು ಬುದ್ಧಿಮಾಂದ್ಯ ಮಕ್ಕಳ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಹಿಂಸಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿಯೂ ಶಿಕ್ಷಕರ ಕ್ರೌರ್ಯ ವೈರಲ್ ಆಗಿದೆ.
ಮಹಾರಾಷ್ಟ್ರ ಮೂಲದವರಾದ ಶಿಕ್ಷಕ ಅಕ್ಷಯ್ ಹಾಗೂ ಪತ್ನಿ ಮಾಲಿನಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದು, ಸಹ ಶಿಕ್ಷಕ ವಿಶಾಲ್ ಎಂಬಾತ ಕೂಡ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬುದ್ಧಿಮಾಂದ್ಯ ಮಕ್ಕಳಿಂದ ಬಾತ್ ರೂಮ್, ಶೌಚಾಲಯವನ್ನು ಕ್ಲೀನ್ ಮಾಡಿಸುವುದು, ಮಧ್ಯರಾತ್ರಿವರೆಗೆ ಮಕ್ಕಳನ್ನು ದುಡಿಸಿಕೊಳ್ಳುವುದು, ಮಕ್ಕಳು ಕೆಲಸ ಮಾಡಲು ಒಪ್ಪದಿದ್ದಾಗ ಅವರನ್ನು ಕಾಲಿನಿಂದ ತುಳಿದು, ಬೆಲ್ಟ್, ಪೈಪ್ ನಿಂದ ಹೊಡೆದು ಹಲ್ಲೆ ನಡೆಸುವುದು ಮಾಡಿದ್ದಾರೆ.
ಅಲ್ಲದೇ ದೀಪಕ್ ಎಂಬ ಬಾಲಕನನ್ನು ಮನಬಂದಂತೆ ಥಳಿಸಿರುವ ಶಿಕ್ಷಕರು, ಕಣ್ಣಿಗೆ ಖಾರದ ಪುಡಿ ಎರಚಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಈ ಬಗ್ಗೆ ದೀಪಕ್ ತಾಯಿ ಮಗನ ಸ್ಥಿತಿಕಂಡು ಕಣ್ಣೀರಿಟ್ಟಿದ್ದಾರೆ. ವಿಶೇಷ ಚೇತನ ಮಕ್ಕಳ ಮೇಲೆ ವಸತಿ ಶಾಲೆಯಲ್ಲಿಯೇ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.ಬಾಗಲಕೋಟೆಯ ನವನಗರ ಠಾಣೆಯಲ್ಲಿ ಶಾಲೆ ವಿರುದ್ಧ ದೂರು ದಾಖಲಾಗಿದೆ.




