ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿರುವ ಬೆನ್ನಲ್ಲೇ ಬಂಧನ ಭೀತಿಯಲ್ಲಿರುವ ಶಾಸಕ ಬೈರತಿ ಬಸವರಾಜ್, ತಲೆಮರೆಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಬೈರತಿ ಬಸವರಾಜ್, ಅಲ್ಲಿಂದಲೇ ಎಸ್ಕೇಪ್ ಆಗಿದ್ದು, ಮಹಾರಾಷ್ಟ್ರ ಅಥವಾ ಗೋವಾದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳ ಮೂರು ವಿಶೇಷ ತಂಡ ರಚನೆಗೊಂಡಿದ್ದು, ಬೈರತಿ ಬಸವರಾಜ್ ಗಾಗಿ ಹುಡುಕಾಟ ನಡೆಸಲಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಬೈರತಿ ಬಸವರಾಜ್ ಅವರ ಮೊಬೈಲ್ ಲೊಕೇಶನ್ ಪತ್ತೆಯಾಗಿತ್ತು. ಆ ಬಳಿಕ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ.
ಈ ಹಿನ್ನೆಲೆಯಲ್ಲಿ ಅವರು ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿರಬಹುದು ಎನ್ನಲಾಗಿದೆ. ಇನ್ನೊಂದು ಶಂಕೆಯಲ್ಲಿ ಅವರು ಪುಣೆಯಿಂದ ಗೋವಾದತ್ತ ಸಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಬಿಕ್ಲು ಶಿವ ಕೊಲೆ ಆರೋಪಿಗಳ ಜೊತೆ ಬೈರತಿ ಬಸವರಾಜ್ ಸಂಪರ್ಕದಲ್ಲಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಅಲ್ಲದೇ ತನಗೂ ಬಿಕ್ಲು ಶಿವ ಕೊಲೆ ಪ್ರಕರಣಕ್ಕೂ ಸಂಬಂಧವಿಲ್ಲ. ಆರೋಪಿಗಳು ತನಗೆ ಪರುಚಯವೇ ಇಲ್ಲ ಎಂದು ಪೊಲೀಸರಿಗೆ ಸುಳ್ಳು ಹೇಳಿದ್ದರು ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ನಿರೀಕ್ಷಣಾ ಜಾಮೀನು ವಜಾಗೊಳಿಸಿತ್ತು.




