ಹುಬ್ಬಳ್ಳಿ: ಅನ್ಯ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸಿ ಮದುವೆಯಾಗಿ ಗರ್ಭಿಣಿಯಾಗಿದ್ದ 19 ವರ್ಷದ ಪುತ್ರಿಯನ್ನು ತಂದೆ ಹಾಗೂ ಕುಟುಂಬದವರು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಭಾನುವಾರ ನಡೆದಿದೆ.
ಮಾನ್ಯಾ ಪಾಟೀಲ್(19) ಕೊಲೆಯಾದ ಯುವತಿ.ಪ್ರಕರಣದಲ್ಲಿ ಯುವಕನ ತಂದೆ, ತಾಯಿ ಸೇರಿದಂತೆ ನಾಲ್ಕೈದು ಜನ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಪ್ರಕಾಶಗೌಡ ಪಾಟೀಲ ಹಾಗೂ ಕುಟುಂಬದವರಾದ ವೀರನಗೌಡ, ಅರುಣ ಗೌಡ ಅವರನ್ನು ವಶಕ್ಕೆ ಪಡೆಯಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಏಳೆಂಟು ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ತಿಳಿಸಿದ್ದಾರೆ.
ಮಾನ್ಯಾ ಪಾಟೀಲ್ ಹಾಗೂ ವಿವೇಕಾನಂದ ದೊಡ್ಡಮನಿ ಪ್ರೀತಿಸುತ್ತಿದ್ದರು. ಯುವತಿಯ ಕುಟುಂಬದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರಾಜೀ ಸಂಧಾನ ನಡೆದಿತ್ತು.
ಎಂಟು ತಿಂಗಳ ಹಿಂದೆ ಇಬ್ಬರೂ ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದರು. ಮಾನ್ಯಾ 7 ತಿಂಗಳ ಗರ್ಭಿಣಿಯಾಗಿದ್ದರಿಂದ ಈ ಇನಾಂವೀರಾಪುರ ಗ್ರಾಮಕ್ಕೆ ಮರಳಿ ಬಂದಿದ್ದರು.
ಈ ಸುದ್ದಿ ತಿಳಿದ ಯುವತಿಯ ತಂದೆ ಹಾಗೂ ಕುಟುಂಬದವರು ಭಾನುವಾರ ಸಂಜೆ ಮನೆ ಮತ್ತು ಹೊಲಕ್ಕೆ ನುಗ್ಗಿ ಕೊಡಲಿಯಿಂದ ಕೊಚ್ಚಿ ಹಲ್ಲೆ ಮಾಡಿದ್ದಾರೆ. ವಿವೇಕಾನಂದ ಪರಾರಿಯಾಗಿದ್ದಾನೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.




