ನವದೆಹಲಿ: ವಿವಾದಿತ ಚುನಾವಣಾ ಬಾಂಡ್ ಗಳನ್ನು ಸುಪ್ರೀಂಕೋರ್ಟ್ ರದ್ದು ಮಾಡಿದ ನಂತರ ಮೊದಲ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 9 ಪ್ರಮುಖ ಚುನಾವಣಾ ಟ್ರಸ್ಟ್ ಗಳಿಂದ 3811 ಕೋಟಿ ರೂ. ದೇಣಿಗೆ ಹರಿದು ಬಂದಿದೆ ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ದೇಣಿಗೆ ಬಂದಿದೆ.ಒಟ್ಟು ದೇಣಿಗೆಯಲ್ಲಿ ಶೇಕಡ 82 ರಷ್ಟು ಪಾಲು ಆಡಳಿತ ರೂಢ ಬಿಜೆಪಿ ಪಾಲಾಗಿದೆ.
ಕಳೆದ ಆರ್ಥಿಕ ವರ್ಷದಲ್ಲಿ 9 ಚುನಾವಣೆ ಟ್ರಸ್ಟ್ ಗಳು ನೀಡಿದ ದೇಣಿಗೆಯಲ್ಲಿ ಬಿಜೆಪಿ ಸಿಂಹಪಾಲು ಪಡೆದುಕೊಂಡಿದೆ.
ವಿತರಿಸಲಾದ ಒಟ್ಟು 3811.34 ಕೋಟಿ ರೂ. ದೇಣಿಗೆಯಲ್ಲಿ 3142.65 ಕೋಟಿ ರೂ. ಶೇಕಡ 82.45 ರಷ್ಟು ಬಿಜೆಪಿಗೆ ನೀಡಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ಟ್ರಸ್ಟ್ ಗಳು ಮಾಹಿತಿ ನೀಡಿವೆ.
ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಗೆ 298.76 ಕೋಟಿ ರೂಪಾಯಿ ದೇಣಿಗೆ ವಿತರಿಸಲಾಗಿದೆ. ತೃಣ ಮೂಲ ಕಾಂಗ್ರೆಸ್ ಗೆ 102 ಕೋಟಿ ರೂಪಾಯಿ, ವೈ.ಎಸ್.ಆರ್. ಕಾಂಗ್ರೆಸ್ ಗೆ 44 ಕೋಟಿ ರೂಪಾಯಿ, ಭಾರತ ರಾಷ್ಟ್ರ ಸಮಿತಿಗೆ 10 ಕೋಟಿ ರೂಪಾಯಿ, ಬಿಜೆಡಿಗೆ 15 ಕೋಟಿ ರೂಪಾಯಿ ಡಿಎಂಕೆಗೆ 10 ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ.
ಅತ್ಯಧಿಕ 2668.49 ಕೋಟಿ ರೂ ದೇಣಿಗೆ ಸಂಗ್ರಹಿಸಿದ ಫ್ರುಡೆಂಟ್ ಚುನಾವಣಾ ಟ್ರಸ್ಟ್ ವತಿಯಿಂದ ಬಿಜೆಪಿಗೆ 2180.71 ಕೋಟಿ ರೂಪಾಯಿ ನೀಡಲಾಗಿದೆ.
ಕಾಂಗ್ರೆಸ್ ಗೆ 21.36 ಕೋಟಿ ರೂ. ನೀಡಲಾಗಿದೆ. 915 ಕೋಟಿ ರೂಣಿಗೆ ಸಂಗ್ರಹಿಸಿದ್ದ ಪ್ರೋಗ್ರೆಸ್ಸಿವ್ ಚುನಾವಣಾ ಟ್ರಸ್ಟ್ ಬಿಜೆಪಿಗೆ 757.62 ಕೋಟಿ ರೂ. ನೀಡಿದೆ. ಕಾಂಗ್ರೆಸ್ ಗೆ 77.34 ಕೋಟಿ ರೂ. ನೀಡಿದೆ.
ಒಟ್ಟು 19 ಚುನಾವಣಾ ಟ್ರಸ್ಟ್ ಗಳ ಪೈಕಿ 13 ಟ್ರಸ್ಟ್ ಗಳು ಆಯೋಗಕ್ಕೆ ದೇಣಿಗೆ ವಿತರಣೆಯ ವಿವರ ಸಲ್ಲಿಸಿವೆ. ವಿವಿಧ ಕಂಪನಿಗಳು ಮತ್ತು ವ್ಯಕ್ತಿಗಳಿಂದ ಸ್ವೀಕರಿಸಿದ ದೇಣಿಗೆಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸುವ ಉದ್ದೇಶದಿಂದ ಸ್ಥಾಪಿಸಲಾದ ಕಾರ್ಪೊರೇಟ್ ದೇಣಿಗೆ ವ್ಯವಸ್ಥೆಯೇ ಚುನಾವಣಾ ಟ್ರಸ್ಟ್ ಗಳು.
ಆರ್ಥಿಕ ವರ್ಷದಲ್ಲಿ ಸಂಗ್ರಹಿಸಿದ ದೇಣಿಗೆಯಲ್ಲಿ ಶೇಕಡ 95 ರಷ್ಟು ಹಣವನ್ನು ರಾಜಕೀಯ ಪಕ್ಷಗಳಿಗೆ ವಿತರಿಸುವುದು ಕಡ್ಡಾಯವಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ, ಚುನಾವಣಾ ಆಯೋಗದ ನಿಯಂತ್ರಣದಲ್ಲಿ ಟ್ರಸ್ಟ್ ಗಳು ದೇಣಿಗೆ ಸಂಗ್ರಹಿಸಿ ವಿತರಿಸುವ ಕಾರ್ಯ ನಿರ್ವಹಿಸುತ್ತವೆ.




