ಚೇಳೂರು : ದಲಿತ ಸಮುದಾಯದ ಮೇಲಾಗುತ್ತಿರುವ ಶೋಷಣೆಗಳನ್ನು ತಡೆಗಟ್ಟಲು ಮತ್ತು ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟವೇ ಏಕೈಕ ದಾರಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣಪ್ಪ ತಿಳಿಸಿದರು.
ತಾಲೂಕಿನ ಪ್ರವಾಸ ಮಂದಿರದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಚೇಳೂರು ತಾಲೂಕು ಸಮಿತಿ ಸರ್ವ ಸದಸ್ಯರ ಸಭೆ ಮತ್ತು ನೂತನ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಮೂಲಕ ಶೋಷಿತ ವರ್ಗದ ಜನರಿಗೆ ಧ್ವನಿಯಾಗಬೇಕು. ಪ್ರತಿಯೊಬ್ಬ ಕಾರ್ಯಕರ್ತರು ಅಂಬೇಡ್ಕರ್ ಅವರ ತತ್ವಗಳನ್ನು ಮೈಗೂಡಿಸಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸಲು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಚಿಂತಾಮಣಿ ವಿಜಯ ನರಸಿಂಹ ಅವರು, ಚೇಳೂರು ನೂತನ ತಾಲೂಕಾಗಿ ಅಸ್ತಿತ್ವಕ್ಕೆ ಬಂದಿದ್ದರೂ, ಕಳೆದ ಎಂಟು ವರ್ಷಗಳಿಂದ ಇಲ್ಲಿ ಸಮರ್ಪಕ ಅಭಿವೃದ್ಧಿ ನಡೆದಿಲ್ಲ. ಅನುದಾನದ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲೂಕು ಕೇಂದ್ರ ಹಿಂದುಳಿದಿದೆ. ಶೋಷಿತ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆಗಾಗಿ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕಿದೆ ಎಂದು ತಿಳಿಸಿದರು.
ಪ್ರೊ. ಬಿ. ಕೃಷ್ಣಪ್ಪನವರು ಹಾಕಿಕೊಟ್ಟ ತತ್ವದಡಿ ದಲಿತ ಸಮುದಾಯವನ್ನು ಒಗ್ಗೂಡಿಸಿ, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚೇಳೂರಿನ 12 ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ಒಳಗೊಂಡ ಸಕ್ರಿಯ ತಾಲೂಕು ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯ ಸಂಚಾಲಕರಾದ ವಿಜಯ ನರಸಿಂಹ, ಸುಲಿಕುಂಟೆ ರಮೇಶ್ ಹಾಗೂ ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣಪ್ಪ ಅವರು ಜಂಟಿಯಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸಿದರು.
ಗಾಯಕರಾದ ವೈ. ನರಸಿಂಹಪ್ಪ ಅವರು ಪ್ರಚಲಿತ ವಿದ್ಯಮಾನ ಹಾಗೂ ಹೋರಾಟದ ಕುರಿತಾದ ಕ್ರಾಂತಿ ಗೀತೆಗಳನ್ನು ಹಾಡಿ ಗಮನ ಸೆಳೆದರು.
ರಾಜ್ಯ ಮತ್ತು ಜಿಲ್ಲಾ ಸಂಚಾಲಕರ ಸಮ್ಮುಖದಲ್ಲಿ ಗಿನ್ನಿ ಶ್ರೀನಿವಾಸ್, ಪಾಳ್ಯಕೆರೆ ಬಾಬು ಹಾಗೂ ಚಾಕವೇಲು ಅಂಜಿ ಅವರು ಅಧಿಕೃತವಾಗಿ ಸಂಘದ ಸದಸ್ಯತ್ವ ಪಡೆದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿಲಕಲನೇರ್ಪು ಮಧುಸೂಧನ, ಅಜರ್,
ಕೆ.ನಂಜುಂಡಪ್ಪ,ನಾರಾಯಣಸ್ವಾಮಿ, ವಕೀಲರು ಶ್ರೀನಿವಾಸ್,ಮುನಿವೆಂಕಟಪ್ಪ,ಅಂಜಿನಪ್ಪ,ವೆಂಕಟೇಶ್,
ಸೇರಿದಂತೆ ಹಲವು ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ವರದಿ : ಯಾರಬ್. ಎಂ




