ಕಲಬುರಗಿ: ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸಿ, ಗ್ರಾಮ ಪಂಚಾಯಿತಿಗಳನ್ನು ದುರ್ಬಲಗೊಳಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರುವ ವಿಕಸಿತ ಭಾರತ ರೋಜಗಾರ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ–2025 (VB-G RAM G) ಅನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಸೋಮವಾರ ಸಂಸದರ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸಂಸದರ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕಲಬುರಗಿ ಸಂಸದರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಗ್ರಾಕೋಸ್ ಸಂಘದ ಮುಖಂಡ ಶರಣಗೌಡ ಪಾಟೀಲ್ ಮಾತನಾಡಿ, ‘ಕಾರ್ಮಿಕರು ಹಾಗೂ ಅವರ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಕೇಂದ್ರ ಸರ್ಕಾರ ಈ ಮಸೂದೆಯನ್ನು ರಚಿಸಿದೆ” ಎಂದು ಆಕ್ಷೇಪಿಸಿದರು.
ಈ ಮಸೂದೆ ಮನರೇಗಾ 2005 ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಹುನ್ನಾರವಾಗಿದ್ದು, ಬೇಡಿಕೆ ಆಧಾರಿತ ಉದ್ಯೋಗ ಖಾತರಿ ಹಕ್ಕನ್ನು ಕೇಂದ್ರಿಕೃತ, ವಿವೇಚನಾಯುಕ್ತ ಹಾಗೂ ಬಜೆಟ್ ನಿಯಂತ್ರಿತ ಯೋಜನೆಯನ್ನಾಗಿ ಪರಿವರ್ತಿಸುವ ಪ್ರಯತ್ನವಾಗಿದೆ’ ಎಂದು ಅವರು ಆರೋಪಿಸಿದರು.
‘ಪ್ರಸ್ತಾವಿತ ಮಸೂದೆಯಂತೆ ರಾಜ್ಯವಾರು ಬಜೆಟ್ ಹಂಚಿಕೆಯನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸಲಿದ್ದು, ಹೆಚ್ಚುವರಿ ವೆಚ್ಚದ ಹೊರೆ ರಾಜ್ಯ ಸರ್ಕಾರಗಳ ಮೇಲಿದೆ. ಪ್ರತಿ ರಾಜ್ಯದಲ್ಲಿ ಒದಗಿಸಬಹುದಾದ ಮಾನವ ದಿನಗಳ ಸಂಖ್ಯೆಗೆ ಮಿತಿಯನ್ನೂ ವಿಧಿಸಲಾಗಿದೆ. ಈಗಿರುವ ಬಜೆಟ್ನಲ್ಲೇ ಪ್ರತಿ ಕುಟುಂಬಕ್ಕೆ 50 ದಿನಗಳ ಕೆಲಸ ನೀಡಲು ವಿಫಲವಾಗಿರುವ ಕೇಂದ್ರ ಸರ್ಕಾರ, 125 ದಿನಗಳ ಉದ್ಯೋಗದ ಹುಸಿ ಭರವಸೆ ನೀಡುತ್ತಿದೆ’ ಎಂದು ಟೀಕಿಸಿದರು.
ಮನರೇಗಾದಲ್ಲಿ ಕೇಂದ್ರ–ರಾಜ್ಯ ಬಜೆಟ್ ಹಂಚಿಕೆ 90:10 ಇದ್ದರೆ, ಹೊಸ ಮಸೂದೆಯಲ್ಲಿ ಅದನ್ನು 60:40ಕ್ಕೆ ಇಳಿಸಲಾಗಿದೆ. ಕೃಷಿ ಚಟುವಟಿಕೆ ಸಮಯದಲ್ಲಿ 60 ದಿನಗಳ ಕಾಲ ಯೋಜನೆಯನ್ನು ಸ್ಥಗಿತಗೊಳಿಸುವುದರಿಂದ ಮಹಿಳೆಯರು, ಭೂಹೀನರು ಮತ್ತು ಅಂಚಿನ ಸಮುದಾಯಗಳು ಉದ್ಯೋಗ ಹಕ್ಕಿನಿಂದ ವಂಚಿತರಾಗುತ್ತಾರೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರವೇ ಕಾಮಗಾರಿಗಳನ್ನು ನಿಗದಿಪಡಿಸುವ ಮೂಲಕ ಗ್ರಾಮ ಸಭೆಗಳ ಅಧಿಕಾರವನ್ನು ಕುಂದಿಸಲಾಗಿದ್ದು, 73ನೇ ಸಂವಿಧಾನ ತಿದ್ದುಪಡಿಯ ವಿಕೇಂದ್ರಿಕೃತ ಆಡಳಿತ ವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ಹೇಳಿದರು. ಜೊತೆಗೆ ಡಿಜಿಟಲ್ ಹಾಜರಾತಿ (ಎನ್ಎಂಎಂಎಸ್), ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್), ಬಯೋಮೆಟ್ರಿಕ್ ದೃಢೀಕರಣದಂತಹ ತಾಂತ್ರಿಕ ನಿಯಂತ್ರಣಗಳಿಂದ ಸಾವಿರಾರು ಕಾರ್ಮಿಕರನ್ನು ಕೆಲಸದಿಂದ ಹೊರಗಿಡಲಾಗುತ್ತಿದೆ’ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರೇವಣಸಿದಪ್ಪ, ಸುನೀತಾ, ನೀಲಮ್ಮ ಮಹಾಗಾಂವ್, ಈರಮ್ಮ ಮರತೂರ್, ಪ್ರಕಾಶ ಆಳಂದ್, ವಿಜಯಲಕ್ಷ್ಮೀ ಕಂದಕೂರ್, ವಿಜಯಲಕ್ಷ್ಮೀ ಗುರಮಿಠಕಲ್, ನಿರ್ಮಲ, ಪವಿತ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




