ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು ಇತ್ತೀಚೆಗೆ ಬಹಿರಂಗಪಡಿಸಿರುವ ಮಾಹಿತಿಯು ಬಿಜೆಪಿ ಅವಧಿಯಲ್ಲಿ ರಾಜಕೀಯ ಹೂಡಿಕೆಯ ಬಗೆಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಎಲೆಕ್ಟೋರಲ್ ಬಾಂಡ್ ಎಂಬ ‘ಹಗರಣ’ ವ್ಯವಸ್ಥೆಯನ್ನು ರದ್ದುಗೊಳಿಸಿದ ನಂತರದ ವರ್ಷ 2024-25ರಲ್ಲಿ ಬಿಜೆಪಿ ಪಡೆದ ದೇಣಿಗೆ ₹6,088 ಕೋಟಿ ತಲುಪಿದೆ, ಇದು ಹಿಂದಿನ ವರ್ಷಕ್ಕಿಂತ 53% ಹೆಚ್ಚಳವಾಗಿದೆ ಎನ್ನುವುದು ಆಶ್ಚರ್ಯಕರ ವಿಚಾರ.
ಪಾರದರ್ಶಕತೆಯಿಲ್ಲದೆ ಇರುವ ಮತ್ತು ಭ್ರಷ್ಟ ರಾಜಕೀಯ ಹೂಡಿಕೆಗಳನ್ನು ಕಾನೂನಾತ್ಮಕಗೊಳಿಸುತ್ತಿದ್ದ ಕಾರಣಕ್ಕೆ ಎಲೆಕ್ಟೋರಲ್ ಬಾಂಡ್‌ಗಳನ್ನು ರದ್ದುಗೊಳಿಸಲಾಗಿದೆ. ಈ ರದ್ದತಿಯ ನಂತರವೂ ಬಿಜೆಪಿಯ ದೇಣಿಗೆಗಳು ಗಣನೀಯವಾಗಿ ಏರಿಕೆಯಾಗಿದೆ.
ಎಲೆಕ್ಟೋರಲ್ ಬಾಂಡ್‌ಗಳು ಭ್ರಷ್ಟಾಚಾರದ ಕರಾಳಯುಗಕ್ಕೆ ಕಾರಣವಾಗಿದೆ, ಕೇಂದ್ರದ ಅಧಿಕಾರ ದುರುಪಯೋಗ ಯಾವುದೇ ಒಂದು ಯೋಜನೆಗೆ ಸೀಮಿತವಾಗಿರದೆ ವ್ಯಾಪಕವಾಗಿ ಹರಡಿದೆ ಎಂಬ ನಮ್ಮ ಮಾತು ಇದರಿಂದ ಸಾಬೀತಾಗಿದೆ ಎಂದಿದ್ದಾರೆ.
ಬಹಿರಂಗಗೊಂಡಿರುವ ಅಂಕಿಅಂಶಗಳು ಬಿಜೆಪಿ ಮತ್ತು ವಿಪಕ್ಷಗಳ ನಡುವಿನ ಆರ್ಥಿಕ ಅಸಮತೋಲನದ ಗಂಭೀರತೆಯನ್ನು ಹೇಳುತ್ತದೆ.
2024 ಲೋಕಸಭಾ ಚುನಾವಣೆಯ ವರ್ಷದಲ್ಲಿ ಬಿಜೆಪಿಯ ಸುಮಾರು ₹6,100 ಕೋಟಿ ನಿಧಿ ಸಂಗ್ರಹಿಸಿದರೆ, ಕಾಂಗ್ರೆಸ್‌ಗೆ ಬಂದಿದ್ದು ₹522 ಕೋಟಿ ಮಾತ್ರ.
ಹತ್ತಕ್ಕೂ ಹೆಚ್ಚು ವಿರೋಧ ಪಕ್ಷಗಳ ಒಟ್ಟು ದೇಣಿಗೆಗಳು ₹1,343 ಕೋಟಿ ಅಂದರೆ ಬಿಜೆಪಿಯ ಸಂಪತ್ತಿನ ನಾಲ್ಕನೇ ಒಂದು ಭಾಗಕ್ಕಿಂತಲೂ ಕಡಿಮೆ. ಈ ರೀತಿಯ ಸಂಪತ್ತಿನ ಏಕಮುಖ ಸಂಗ್ರಹಣೆಯು ಸಮಾನ ಅವಕಾಶ ಮತ್ತು ಪ್ರಜಾಪ್ರಭುತ್ವದ ಸ್ಪರ್ಧಾತ್ಮಕ ಆಶಯಗಳನ್ನು ಹತ್ತಿಕ್ಕುತ್ತದೆ. ಕಳೆದ ವರ್ಷ ಎಲೆಕ್ಟೋರಲ್ ಬಾಂಡ್‌ಗೆ ಸಂಬಂಧಿಸಿದ ಮಾಹಿತಿ ಹೊರಬಂದ ನಂತರ, ನಿಧಿ ಸಂಗ್ರಹಣೆಯ ವ್ಯವಸ್ಥಿತ ಮಾದರಿಯನ್ನು ಇದು ಬಹಿರಂಗಪಡಿಸಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಯ ನಿಧಿ ಸಂಗ್ರಹಣೆಯು 4 ರೀತಿಗಳಲ್ಲಿ ನಡೆಯುತ್ತದೆ –
* ಮೊದಲಿಗೆ ಕಂಪನಿಗಳು ದೇಣಿಗೆ ನೀಡುತ್ತವೆ, ಬಳಿಕ ಸರ್ಕಾರದಿಂದ ಗುತ್ತಿಗೆ ಕಾಮಗಾರಿ ಪಡೆಯುತ್ತವೆ ಅಥವಾ ಅವುಗಳಿಗೆ ಅನುಕೂಲವಾಗುವಂತಹ ನೀತಿ – ನಿಯಮಗಳನ್ನು ರೂಪಿಸಲಾಗುತ್ತದೆ.
* ಐಟಿ, ಇಡಿ, ಸಿಬಿಐ ಮುಂತಾದ ತನಿಖಾ ಸಂಸ್ಥೆಗಳು ದಾಳಿ ಮಾಡುತ್ತವೆ, ಬಳಿಕ ಪಕ್ಷಕ್ಕೆ ದೇಣಿಗೆ ಬರುತ್ತದೆ.
* ಅನೇಕ ಸಂದರ್ಭಗಳಲ್ಲಿ, ಮೊದಲು ಟೆಂಡರ್ ನೀಡಿ ಬಳಿಕ ‘ದೇಣಿಗೆ’ ಪಡೆಯಲಾಗಿದೆ. ಹೀಗೆ ಭ್ರಷ್ಟಾಚಾರವನ್ನು ಬ್ಯಾಂಕಿಂಗ್ ವಹಿವಾಟಾಗಿ ಪರಿವರ್ತಿಸಿದೆ.
ಬೇನಾಮಿ ಮತ್ತು ನಕಲಿ ಕಂಪನಿಗಳನ್ನು ಹಣದ ಅಕ್ರಮ ವರ್ಗಾವಣೆಗೆ ಅಥವಾ ಸಾಗಾಟಕ್ಕೆ ಬಳಕೆ ಮಾಡಲಾಯಿತು.
ಇವು ಯಾವೂ ಒಂದಕ್ಕೊಂದು ಸಂಬಂಧವಿಲ್ಲದ ಘಟನೆಗಳಲ್ಲ, ಎಲ್ಲವೂ ಒಂದು ವ್ಯವಸ್ಥಿತ ಸಂಚಿನ ಮಾದರಿ.
ಎಲೆಕ್ಟೋರಲ್ ಬಾಂಡ್‌ಗಳನ್ನು ರದ್ದುಗೊಳಿಸಿದರೂ, ಅದರ ಮೂಲ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ತನಿಖಾ ಸಂಸ್ಥೆಗಳ ಮೇಲಿನ ನಿಯಂತ್ರಣ, ವಿವೇಚನಾಧಿಕಾರ ಮತ್ತು ಒತ್ತಡ ಹೇರುವ ತಂತ್ರಗಳ ಮೂಲಕ ಗುರಿ ಸಾಧಿಸಲಾಗುತ್ತಿದೆ. ಹಣ ಸಂಗ್ರಹಣೆಯ ತಂತ್ರಗಳೇನೇ ಇರಲಿ, ಭಯ ಮತ್ತು ಪಕ್ಷಪಾತಿ ನಿಲುವುಗಳು ಸರ್ಕಾರದ ಸಾಧನಗಳಾದಾಗ ಹಣದ ಹರಿವು ಸರಾಗವಾಗಿರುತ್ತದೆ.
ಈ ಹಣದ ಪ್ರಾಬಲ್ಯವು 2024ರ ಲೋಕಸಭಾ ಚುನಾವಣೆಯ ಮೇಲೆ ನೇರ ಪ್ರಭಾವ ಬೀರಿದೆ. ಒಂದು ಪಕ್ಷವು ಅಪಾರ ಸಂಪನ್ಮೂಲಗಳೊಂದಿಗೆ, ಮಾಧ್ಯಮದಲ್ಲಿ ಸದಾಕಾಲ ಸುದ್ದಿಯಲ್ಲಿರುತ್ತಾ, ವಿವಿಧ ಸಂಸ್ಥೆಗಳ ಬಲದೊಂದಿಗೆ ಸ್ಪರ್ಧೆಗಿಳಿದರೆ, ವಿರೋಧ ಪಕ್ಷಗಳು ತೀವ್ರ ನಿರ್ಬಂಧಗಳ ಅಡಿಯಲ್ಲಿ ಹೋರಾಡಿದವು. ಹೀಗೆ ಅಸಮಾನ ಅವಕಾಶ ಮತ್ತು ಸ್ವಾಯತ್ತ ಸಂಸ್ಥೆಗಳ ಪಕ್ಷಪಾತಿತನವನ್ನು ನ್ಯಾಯಸಮ್ಮತ ಪ್ರಜಾಪ್ರಭುತ್ವ ಎಂದು ಪರಿಗಣಿಸಲಾಗದು.
ಆದರೂ, ದೇಶದ ಜನತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಅಪಾರ ಹಣಬಲದ ಹೊರತಾಗಿಯೂ ಬಿಜೆಪಿ ಪಕ್ಷ ಬಹುಮತವನ್ನು ಕಳೆದುಕೊಂಡಿದೆ, ವಿರೋಧ ಪಕ್ಷಗಳು 230 ಸೀಟುಗಳನ್ನು ದಾಟಿವೆ.
ಹಣ, ಅಧಿಕಾರ ದುರ್ಬಳಕೆ ಮೂಲಕ ಜನರ ಇಚ್ಛೆಯನ್ನು ಶಾಶ್ವತವಾಗಿ ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಈ ಫಲಿತಾಂಶ ಸಾಬೀತು ಮಾಡಿದೆ ಎಂದು ತಿಳಿಸಿದ್ದಾರೆ.
ಹಣಬಲ ಫಲಿಸದ ಕಾರಣದಿಂದಾಗಿಯೇ ಇಂದಿನ ಚುನಾವಣಾ ವ್ಯವಸ್ಥೆಯು ಹೊಸಹೊಸ ರೀತಿಯ ಮತ್ತು ಅಷ್ಟೇ ಅಪಾಯಕಾರಿಯಾದಂತಹ ಬೆದರಿಕೆ ಎದುರಿಸುತ್ತಿದೆ.
ಮತದಾರರ ಪಟ್ಟಿಯ ತಿರುಚುವಿಕೆ, ಚುನಾವಣೆಯ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮತ್ತು ತಟಸ್ಥವಾಗಿರಬೇಕಾಗಿದ್ದ ಚುನಾವಣಾ ಆಯೋಗವನ್ನು ಪಕ್ಷಪಾತಿಯಾಗಿಸುವ ಪ್ರಯತ್ನಗಳನ್ನು ನಾವು ಕಾಣುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಜಕೀಯ ಪಕ್ಷಗಳಿಗೆ ನೀಡುವ ರಹಸ್ಯ ದೇಣಿಗೆಯನ್ನು ದೇಶ ತಿರಸ್ಕರಿಸಿತು, ಭಾರತೀಯರು ಹಣಬಲವನ್ನು ಧಿಕ್ಕರಿಸಿ ನಿಂತರು.
ಹಣಬಲದ ಮೂಲಕ ವ್ಯವಸ್ಥೆಯ ಮೇಲೆ ಪೂರ್ಣ ಹಿಡಿತ ಸಾಧಿಸಲು ಸಾಧ್ಯವಾಗದ ಕಾರಣಕ್ಕೆ, ಬಿಜೆಪಿಯವರು ಇಡೀ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿ ಮತವನ್ನು ರಕ್ಷಿಸುವುದು, ಪಾರದರ್ಶಕತೆಯನ್ನು ಕಾಪಾಡುವುದು ಮತ್ತು ಪ್ರಜಾಸತ್ತಾತ್ಮಕ ಚಿಂತನೆಗಳಿಗೆ ಬಲ ತುಂಬಬೇಕಿರುವ ನಮ್ಮ ಈ ಹೊತ್ತಿನ ಕರ್ತವ್ಯವಾಗಿದೆ. ಇದಕ್ಕಾಗಿ ನಾವೆಲ್ಲರೂ ಜೊತೆಗೂಡಿ ಹೋರಾಟವನ್ನು ಮುನ್ನಡೆಸೋಣ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.




