ತುರುವೇಕೆರೆ: ತಾಲ್ಲೂಕಿನ ಅರೆಮಲ್ಲೇನಹಳ್ಳಿ ಬಳಿ ಕೇವಲ ಎರಡು ದಿನದಲ್ಲಿ ಎರಡು ಚಿರತೆಯನ್ನು ಸೆರೆ ಹಿಡಿದು ನಾಗರೀಕರಲ್ಲಿ ಉಂಟಾಗಿದ್ದ ಭಯ ಶಮನ ಮಾಡುವಲ್ಲಿ ಶ್ರಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಶಾಸಕ ಎಂ.ಟಿ. ಕೃಷ್ಣಪ್ಪ, ತಾಲ್ಲೂಕಿನ ನಾಗರೀಕರು ಅಭಿನಂದಿಸಿದ್ದಾರೆ.
ಕೆಲವು ದಿನದ ಹಿಂದೆ ತಾಲ್ಲೂಕಿನ ಅರೆಮಲ್ಲೇನಹಳ್ಳಿ ಸಮೀಪದ ತೋಟವೊಂದರಲ್ಲಿ ಹಸು ಮೇಯಿಸುತ್ತಿದ್ದ ಸುಜಾತ ಎಂಬ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿ ಸಾಯಿಸಿದ ಪ್ರಕರಣ ನಾಗರೀಕರಲ್ಲಿ ಭಯ, ಆತಂಕಕ್ಕೆ ಕಾರಣವಾಗಿತ್ತು.
ಮಹಿಳೆಯನ್ನು ಸಾಯಿಸಿದ ಮರುದಿನವೇ ನರಭಕ್ಷಕ ಚಿರತೆಯ ಸೆರೆಗೆ ಹಾಗೂ ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದ್ದರು.
ತುರುವೇಕೆರೆಗೆ ಭೇಟಿ ನೀಡಿ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಹಿಳೆಯ ಕುಟುಂಬಕ್ಕೆ ಸರ್ಕಾರದ ಭದ್ರಂ ಯೋಜನೆಯಿಂದ 20 ಲಕ್ಷ ಪರಿಹಾರ ದೊರೆಯಲಿದೆ ಎಂದು ತಿಳಿಸಿ ಸದ್ಯಕ್ಕೆ 5 ಲಕ್ಷ ರೂ ಪರಿಹಾರದ ಚೆಕ್ಕನ್ನು ಶಾಸಕರ ಸಮ್ಮುಖದಲ್ಲಿ ವಿತರಿಸಿದ್ದರು.

ಚಿರತೆಯ ಸೆರೆಗೆ ಶೀಘ್ರ ಕ್ರಮ ಕೈಗೊಂಡ ಜಿಲ್ಲಾಡಳಿತ, ಅರಣ್ಯಇಲಾಖೆ ಡ್ರೋನ್ ಮೂಲಕ ಚಿರತೆಯ ಚಲನವಲನ ಗುರುತಿಸಿ ಘಟನೆ ನಡೆದ 50 ಮೀಟರ್ ಅಂತರದಲ್ಲಿ ಬೋನ್ ಇಡಲಾಗಿತ್ತು. ಅದೇ ಬೋನಿನಲ್ಲಿ ಸೋಮವಾರ ಒಂದು ಚಿರತೆ ಸೆರೆ ಸಿಕ್ಕಿದೆ. ಆದರೆ ಆ ಚಿರತೆ ಮಹಿಳೆಯನ್ನು ಕೊಂದ ಚಿರತೆಯೇ ಅಲ್ಲವೇ ಎಂಬುದು ವೈಜ್ಞಾನಿಕ ಪರೀಕ್ಷೆ ಇಂದ ತಿಳಿಯಬೇಕಿದೆ. ಸೆರೆಗೆ ಸಿಕ್ಕ ಚಿರತೆ ಗಂಡು ಚಿರತೆಯಾಗಿದ್ದು 8 ವರ್ಷ ವಯಸ್ಸಿನದ್ದಾಗಿತ್ತು. ಚಿರತೆ ಸೆರೆಯಿಂದ ಆ ಭಾಗದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಈಗ ಮತ್ತೊಂದು ಹೆಣ್ಣು ಚಿರತೆ ಸಹ ಅದೇ ಭಾಗದಲ್ಲಿ ಬೋನಿಗೆ ಜನನ ಬಿದ್ದಿದ್ದು, ಅರಣ್ಯ ಇಲಾಖೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮೃತ ಮಹಿಳೆ ಕುಟುಂಬದ ನೆರವಿಗೆ ಧಾವಿಸಿದ ದೊಡ್ಡಾಘಟ್ಟ ಚಂದ್ರೇಶ್ :– ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಅವರು ಅರೆಮಲ್ಲೇನಹಳ್ಳಿಗೆ ತೆರಳಿ ಚಿರತೆ ದಾಳಿಗೆ ಬಲಿಯಾದ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 1 ಲಕ್ಷ ರೂ ನೆರವನ್ನು ನೀಡಿದರು.
ಸಹಾಯವಾಣಿ ಆರಂಭ :– ಚಿರತೆ ದಾಳಿಗೆ ಮಹಿಳೆ ಬಲಿಯಾದ ಬೆನ್ನಲ್ಲೇ ತಾಲೂಕು ಆಡಳಿತದಿಂದ ಸಹಾಯವಾಣಿ ಆರಂಭಿಸಲಾಗಿದೆ. ತಾಲ್ಲೂಕಿನಲ್ಲಿ ಎಲ್ಲೇ ಚಿರತೆ ಕಂಡುಬಂದಲ್ಲಿ ನಾಗರೀಕರು ಮೊಬೈಲ್ ಸಂಖ್ಯೆ : 7304975519 ಹಾಗೂ 8162213400 ಗೆ ಕರೆ ಮಾಡಿ ಅಥವಾ ವಾಟ್ಸಪ್ ಮೂಲಕ ಮಾಹಿತಿ ನೀಡಬಹುದಾಗಿದೆ.
ವರದಿ: ಗಿರೀಶ್ ಕೆ ಭಟ್




