ಸುಜಾತ ಕುಟುಂಬಕ್ಕೆ ಸಾಂತ್ವನ , ವೈಯಕ್ತಿಕವಾಗಿ 50 ಸಾವಿರ ನೆರವು : ನರಭಕ್ಷಕ ಚಿರತೆ ಕಂಡಲ್ಲಿ ಗುಂಡಿಕ್ಕಲು ಆದೇಶಿಸುವಂತೆ ಒತ್ತಾಯ
ತುರುವೇಕೆರೆ : ತಾಲೂಕಿನ ಅರೆಮಲ್ಲೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ದಾಳಿಗೆ ಬಲಿಯಾದ ಸುಜಾತ ಕುಟುಂಬಕ್ಕೆ ಸಾಂತ್ವನ ಹೇಳಿದ ಮಾಜಿ ಶಾಸಕ ಮಸಾಲಾ ಜಯರಾಮ್ ಅವರು ವೈಯಕ್ತಿಕವಾಗಿ 50 ಸಾವಿರ ರೂಗಳ ಧನಸಹಾಯ ಮಾಡಿ, ಮಕ್ಕಳ ವಿದ್ಯಾಬ್ಯಾಸಕ್ಕೆ ಅಗತ್ಯ ಸಹಾಯ ಮಾಡುವ ಭರವಸೆ ನೀಡಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮಸಾಲಾ ಜಯರಾಮ್, ಗ್ರಾಮೀಣ ಮಹಿಳೆ ಸುಜಾತ ಅವರು ಎಂದಿನಂತೆ ದನ ಮೇಯಿಸಲು ಹೋದಾಗ ಚಿರತೆ ದಾಳಿ ಮಾಡಿ ಅವರನ್ನು ಬಲಿತೆಗೆದುಕೊಂಡಿದೆ. ಇದು ಬಹಳ ಆಘಾತಕಾರಿಯಾಗಿದ್ದು, ನೋವುಂಟು ಮಾಡಿದೆ. ಆ ತಾಯಿಯ ಇಬ್ಬರು ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದು, ಇಂದು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅವರ ನೋವಿನಲ್ಲಿ ನಾನೂ ಸಹ ಭಾಗಿಯಾಗಿದ್ದೇನೆ. ಯಾವುದೇ ಕುಟುಂಬಕ್ಕೆ ಈ ರೀತಿಯಾಗಬಾರದು ಎಂದರು.
ಕೆಲವು ರಾಜಕೀಯ ವ್ಯಕ್ತಿಗಳು ಕಾಡಿನ ಮರಗಳನ್ನು ಕತ್ತರಿಸಿ ಹೊಲ, ಗದ್ದೆ, ಜಮೀನು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕಾಡು ನಾಶವಾಗಿ ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿಗೆ ಬಂದು ಅಮಾಯಕ ವ್ಯಕ್ತಿಗಳನ್ನು ಬಲಿತೆಗೆದುಕೊಳ್ಳುತ್ತಿವೆ. ಈ ಹಿಂದೆ ತಾಲೂಕಿನ ಮಣೆಚೆಂಡೂರು ಗ್ರಾಮದಲ್ಲಿ ನಮ್ಮ ಸಂಬಂಧಿಕರ ಮಗುವೊಂದನ್ನು ಚಿರತೆ ಬಲಿಪಡೆದಿತ್ತು. ಇದು ತಾಲ್ಲೂಕಿನಲ್ಲಿ ಮೂರನೇ ಪ್ರಕರಣವಾಗಿದೆ. ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟರೂ ಮತ್ತೆ ನಾಡಿಗೆ ಬರುತ್ತವೆ. ದುಷ್ಟಮೃಗಗಳು ಅಮಾಯಕರ ಮೇಲೆ ದಾಳಿ ಮಾಡಿ ಬಲಿತೆಗೆದುಕೊಳ್ಳುತ್ತಿವೆ. ಯಾವುದೋ ಒಂದು ಪ್ರದೇಶದಲ್ಲಿ ಬೋನಿಟ್ಟರೆ ಸಾಲದು, ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಾಯಿ, ಕುರಿ ತಿಂದ ಉದಾಹರಣೆಗಳು ಸಾಕಷ್ಟಿದೆ. ಜನತೆ, ರೈತರು ನಿರ್ಭೀತಿಯಿಂದ ಓಡಾಡದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಶೀಘ್ರ ಈ ಬಗ್ಗೆ ಕ್ರಮ ಕೈಗೊಂಡು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚಿರತೆ ಸೇರಿದಂತೆ ದುಷ್ಟಮೃಗಗಳ ಇಬ್ಬರು ಮಕ್ಕಳು ಬೋನಿಡುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ನರಭಕ್ಷಕ ಪ್ರಾಣಿಗಳಿಂದ ದೇಶ ಉದ್ದಾರವಾಗುವುದಿಲ್ಲ. ನರಭಕ್ಷಕ ಚಿರತೆ ನಾಡಿನಲ್ಲಿ ಕಂಡುಬಂದಲ್ಲಿ ಕಂಡಲ್ಲಿ ಗುಂಡಿಕ್ಕಿ ಸಾಯಿಸಬೇಕೆಂಬ ನಿರ್ದಾಕ್ಷಿಣ್ಯ ಕ್ರಮವನ್ನು ಸರ್ಕಾರ ಹಾಗೂ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಚಿರತೆ ದಾಳಿಗೆ ಬಲಿಯಾದ ಸುಜಾತ ಕುಟುಂಬಕ್ಕೆ ಸರ್ಕಾರ ಘೋಷಿಸಿರುವ 20 ಲಕ್ಷ ಪರಿಹಾರ ಸಾಕಾಗುವುದಿಲ್ಲ, ಕುಟುಂಬದಲ್ಲಿ ಕಳೆದುಕೊಂಡಿರುವ ಜೀವ ಮತ್ತೆ ಬರುವುದಿಲ್ಲ, ಮಕ್ಕಳ ವಿದ್ಯಾಬ್ಯಾಸದ ಖರ್ಚನ್ನು ಸಂಪೂರ್ಣವಾಗಿ ಸರ್ಕಾರ ನೋಡಿಕೊಳ್ಳಬೇಕು. ಕುಟುಂಬಕ್ಕೆ 50 ಲಕ್ಷ ರೂ ಪರಿಹಾರವನ್ನು ನೀಡಬೇಕು ಹಾಗೂ ಸುಜಾತರ ಇಬ್ಬರು ಮಕ್ಕಳ ಪೈಕಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.
ಅರಣ್ಯ ಸಂರಕ್ಷಾಧಿಕಾರಿ ಶಶಿಧರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮಸಾಲಾ ಜಯರಾಮ್, ಚಿರತೆ ಹಾವಳಿಯನ್ನು ತಪ್ಪಿಸಲು ಟಾಸ್ಕ್ ಪೋರ್ಸ್ ರಚಿಸುವಂತೆ ಹಾಗೂ ಹೆಚ್ಚಿನ ಬೋನ್ ಗಳನ್ನು ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಇಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಚಿರತೆ ದಾಳಿಗೆ ಬಲಿಯಾದ ಸುಜಾತ ಕುಟುಂಬಸ್ಥರು, ಬಿಜೆಪಿ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




