ಮುಂಬೈ: ಮುಂಬೈನ ಭಾಂಡಪ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ(ಬೆಸ್ಟ್) ಬಸ್ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 10:05 ರ ಸುಮಾರಿಗೆ ಭಾಂಡಪ್(ಪಶ್ಚಿಮ) ದ ಜನನಿಬಿಡ ಸ್ಟೇಷನ್ ರಸ್ತೆಯಲ್ಲಿ ಬೆಸ್ಟ್ ಬಸ್ ಹಿಮ್ಮುಖವಾಗಿ ಚಲಿಸುವಾಗ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಅಪಘಾತ ಸಂಭವಿಸಿದಾಗ ಬಲಿಪಶುಗಳು ಕೆಲಸದಿಂದ ಮನೆಗೆ ಮರಳುತ್ತಿದ್ದರು.
ಪೊಲೀಸರ ಮಾಹಿತಿಯ ಪ್ರಕಾರ, ಅಪಘಾತದಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ.
ಒಬ್ಬ ಮಹಿಳೆ ಮತ್ತು ಎಂಟು ಪುರುಷರು ಸೇರಿದಂತೆ ಇತರ ಒಂಬತ್ತು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಘಟನೆಯ ನಂತರ ಮುಂಬೈ ಅಗ್ನಿಶಾಮಕ ದಳ(MFB), ಸ್ಥಳೀಯ ಪೊಲೀಸರು, BEST ಸಿಬ್ಬಂದಿ ಮತ್ತು 108 ಆಂಬ್ಯುಲೆನ್ಸ್ ಸೇವೆಗಳು ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ತ್ವರಿತವಾಗಿ ನಡೆಸಲಾಯಿತು ಮತ್ತು ಗಾಯಾಳುಗಳನ್ನು ವಿಳಂಬವಿಲ್ಲದೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ ಪೊಲೀಸರ ಪ್ರಕಾರ, ಬಸ್ನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಮುಂಬೈ ಮತ್ತು ಅದರ ಪಕ್ಕದ ನಗರ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯ ಬಸ್ ಗಳನ್ನು ನಿರ್ವಹಿಸುವ BEST, ಘಟನೆಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ದುರಂತವು ನಗರದ ಜನನಿಬಿಡ ಭಾಗಗಳಲ್ಲಿ ರಸ್ತೆ ಸುರಕ್ಷತೆ ಮತ್ತು ಪಾದಚಾರಿಗಳ ರಕ್ಷಣೆಯ ಬಗ್ಗೆ ಮತ್ತೊಮ್ಮೆ ಆತಂಕ ಹುಟ್ಟುಹಾಕಿದೆ.




