ಬೆಂಗಳೂರು : ಮದ್ಯದ ನಶೆಯಲ್ಲಿ ತಾಯಿಗೆ ತಮಾಷೆ ಮಾಡಲು ಹೋಗಿ ನೇಣು ಕುಣಿಕೆಗೆ ಸಿಲುಕಿ ಬೆಂಗಳೂರಲ್ಲಿ ಯುವಕ ದಾರುಣವಾಗಿ ಮೃತಪಟ್ಟಂತಹ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರೋಹಿತ್ ನಗರದಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ವಿಜಯ್ ಕುಮಾರ್ (28) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ವಿಜಯ್ ಕುಮಾರ್ ಕಂಠಪೂರ್ತಿ ಕುಡಿದು ಮನೆಗೆ ಹೋಗಿದ್ದನು. ನಂತರ ತಾಯಿ ಬಳಿ ಖರ್ಚಿಗೆ ಹಣ ಕೇಳಿದ್ದಾನೆ. ಆಕೆ ಕೊಡಲ್ಲ ಎಂದಿದ್ದಾಳೆ. ಇಷ್ಟಕ್ಕೆ ವಿಜಯ್ ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ ಎಂದು ಬೆದರಿಕೆ ಹಾಕಿದ್ದಾನೆ.
ಅಂತೆಯೇ ನೇಣಿನ ಕುಣಿಕೆಗೆ ಹಗ್ಗ ಹಾಕಿಕೊಳ್ಳುವಂತೆ ತಮಾಷೆ ಮಾಡಿ ನೇಣಿನ ಕುಣಿಕೆಗೆ ಸಿಲುಕಿ ತಪ್ಪಿಸಿಕೊಳ್ಳಲು ಆಗದೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ನೆಲಮಂಗಲ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ರೀತಿ ವಿಜಯ್ ಕುಮಾರ್ ಪೋಷಕರ ಬಳಿ ಹಲವು ಬಾರಿ ತಮಾಷೆ ಮಾಡಿದ್ದನು. ಸಾವಿನ ವಿಚಾರದಲ್ಲಿ ಹೀಗೆ ತಮಾಷೆ ಬೇಡ ಕಣೋ ಎಂದು ತಾಯಿ ಬುದ್ದಿ ಹೇಳಿದ್ದರು. ಆದ್ರೆ ತಾಯಿಗೆ ಮಾತು ಧಿಕ್ಕರಿಸಿದ ಮಗ ಅನ್ಯಾಯವಾಗಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.




