ನೇಸರಗಿ : ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ಕೃಷಿ ಇಲಾಖೆ, ಬೈಲಹೊಂಗಲ ಇವರ ಸಹಯೋಗದಲ್ಲಿ ಬೈಲಹೊಂಗಲ ತಾಲೂಕಿನ ಕೆಂಗಾನೂರು ಗ್ರಾಮದಲ್ಲಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ ನಡೆಸಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಡಾ. ಭಾವಿನಿ ಪಾಟೀಲ ಮತ್ತು ಡಾ. ಗುರುರಾಜ ಕೌಜಲಗಿ ರೈತರೊಂದಿಗೆ ಚರ್ಚಿಸಿ, ಈ ಭಾಗದಲ್ಲಿ ಬೆಳೆಯುವ ವಿವಿಧ ಬೆಳೆಗಳು, ಬೆಳೆ ಪದ್ಧತಿಗಳು, ಸಾಗುವಳಿ ಕ್ಷೇತ್ರ, ನೀರಾವರಿ, ಮಣ್ಣಿನ ಆರೋಗ್ಯ ರೋಗ/ಕೀಟ ಬಾಧೆ, ಹೈನುಗಾರಿಕೆ, ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ ಹಾಗೂ ಬೆಳೆಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ಅಂಕಿ ಅಂಶ ಪಡೆದು ಮಾಹಿತಿ ಸಂಗ್ರಹಿಸಿದರು. ನಂತರ ವಿಜ್ಞಾನಿ ಎಸ್ ಎಂ ವಾರದ ಮಾತನಾಡಿ, ಇಲ್ಲಿ ಬೆಳೆಯುತ್ತಿರುವ ಆಹಾರ ಧಾನ್ಯ, ತೋಟಗಾರಿಕೆ ಬೆಳೆಗಳ ಇಳುವರಿ ಕಡಿಮೆ ಇದ್ದು, ಪಶುಗಳಿಗೆ ಒದಗಿಸುವ ಆಹಾರವು ಅಪೌಷ್ಟಿಕವಾಗಿದೆ.
ಆದ್ದರಿಂದ ಕೃಷಿ ಲಾಭದಾಯಕವಾಗುತ್ತಿಲ್ಲ . ಈ ದಿಸೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಈ ಭಾಗದ ಬೆಳೆಗಳಾದ ಸೋಯಾಬಿನ್, ಹತ್ತಿ, ಗೋವಿನಜೋಳ, ಶೇಂಗಾ, ಹಿಂಗಾರು ಜೋಳ, ಮೆಣಸಿನಕಾಯಿ, ಬದನೆ ಹಾಗೂ ಟೊಮೆಟೊಗಳಲ್ಲಿ ಕ್ಷೇತ್ರ ಪರೀಕ್ಷೆ, ಮುಂಜೂಣಿ ಪ್ರಾತ್ಯಕ್ಷಿಕೆ ಕೈಗೊಂಡು ಅದರಂತೆ ರೈತರಿಗೆ ತರಬೇತಿ ನೀಡಿ ಬೆಳೆಗಳ ಇಳುವರಿ ಹೆಚ್ಚಿಸುವ ಹೊಸ ತಳಿ ಹಾಗೂ ತಂತ್ರಜ್ಞಾನ ಅಳವಡಿಕೆ ಮೂಲಕ ಸಮಗ್ರ ಕೃಷಿ ಉತ್ತೇಜಿಸಿ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕ್ರಿಯಾ ಯೊಜನೆ ರೂಪಿಸಿ ಮುಂಬರುವ ಮುಂಗಾರು ಹಂಗಾಮಿನಿಂದ ಅನುಷ್ಠಾನಗೊಳಿಸಲಾಗುವುದು ಎಂದರು.
ಬೈಲಹೊಂಗಲ ವಲಯದ ಕೃಷಿ ಅಧಿಕಾರಿ ಶ್ರೀ ಯಮನಪ್ಪ ಹಾಗೂ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಶ್ರೀ ಚಂದ್ರಕಾಂತ ಮರಡಿ ಚರ್ಚೆಯಲ್ಲಿ ಭಾಗವಹಿಸಿ ಕೃಷಿ ಇಲಾಖೆಯ ಯೋಜನೆಗಳ ಮಾಹಿತಿ ನೀಡಿದರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಜೊತೆಗೆ ಜಂಟಿಯಾಗಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಂಗಾನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀ ಯಲ್ಲಪ್ಪ ಹುಲಗನ್ನವರ ಹಾಗೂ ಕೃಷಿ ಸಖಿ ಪ್ರಿಯಾಂಕ ಮಾದರ ಉಪಸ್ತಿತರಿದ್ದರು.
ವರದಿ : ದುಂಡಪ್ಪ ಹೂಲಿ




