ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಈಗ ಗಗನಕ್ಕೇರಿದೆ, ಬಂಗಾರ ಕೊಳ್ಳೋಣ ಎಂದು ಕನಸು ಕಾಣುತ್ತಿದ್ದ ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆ ದೊಡ್ಡ ಶಾಕ್ ನೀಡಿದೆ. ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯೂ ರಾಕೆಟ್ ವೇಗದಲ್ಲಿ ಏರುತ್ತಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ.
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು, ರಾಜಕೀಯ ಅಸ್ಥಿರತೆ ಮತ್ತು ಪೂರೈಕೆಯಲ್ಲಿನ ಕೊರತೆ ಈ ಬೆಲೆ ಏರಿಕೆಗೆ ಮುಖ್ಯ ಕಾರಣ. ಅದರಲ್ಲೂ ವೆನೆಜುವೆಲಾ ಮೇಲಿನ ಯುಎಸ್ ದಾಳಿಯು ಬುಲಿಯನ್ ಮಾರುಕಟ್ಟೆಯಲ್ಲಿ ಕಂಪನ ಸೃಷ್ಟಿಸಿದೆ. ಹೂಡಿಕೆದಾರರು ಸೇಫ್ ಆಗಿರಲು ಚಿನ್ನದ ಮೇಲೆ ಹಣ ಹೂಡುತ್ತಿರುವುದರಿಂದ ದರ ಏರಿಕೆಗೆ ಮತ್ತಷ್ಟು ವೇಗ ಸಿಕ್ಕಿದೆ
ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯು ಬುಧವಾರದಂದು ಅಕ್ಷರಶಃ ಭರ್ಜರಿ ಜಿಗಿತವನ್ನು ಕಂಡಿದ್ದು, ಒಂದೇ ದಿನದಲ್ಲಿ ಪ್ರತಿ ಗ್ರಾಮ್ ಬೆಳ್ಳಿ ದರದಲ್ಲಿ 10 ರೂಪಾಯಿ ಏರಿಕೆಯಾಗಿದ್ದರೆ, ಕಳೆದ ಕೇವಲ ಮೂರು ದಿನಗಳ ಅವಧಿಯಲ್ಲಿ ಒಟ್ಟು 22 ರೂಪಾಯಿಯಷ್ಟು ಏರಿಕೆ ದಾಖಲಾಗಿದೆ.
ಇತ್ತ ಚಿನ್ನದ ಬೆಲೆಯೂ ಗಗನಕ್ಕೇರಿದ್ದು, ಸದ್ಯ ಭಾರತದಲ್ಲಿ 10 ಗ್ರಾಮ್ ತೂಕದ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1,27,850 ರೂಪಾಯಿ ತಲುಪಿದೆ. ಇನ್ನು ಶುದ್ಧವಾದ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಮ್ಗೆ 1,39,480 ರೂಪಾಯಿ ಆಗಿದೆ.




