ಚೇಳೂರು: ತಾಲೂಕಿನ ಹೊರವಲಯದ ಶೇರ್ ಖಾನ್ ಕೋಟೆ ಗ್ರಾಮದ ಕೆರೆಗೆ ಅಕ್ರಮವಾಗಿ ಕೋಳಿ ತ್ಯಾಜ್ಯ ಸುರಿಯಲಾಗುತ್ತಿದ್ದು, ಗ್ರಾಮದ ಪ್ರಮುಖ ಜಲಮೂಲ ಸಂಪೂರ್ಣ ಕಲುಷಿತಗೊಂಡಿದೆ.
ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಎಸೆದಿರುವ ಮಾಂಸದ ಲೊಜೆಗಳು ನೀರಿನ ಮೇಲೆ ತೇಲುತ್ತಿದ್ದು, ಕೆರೆಯ ಸುತ್ತಮುತ್ತ ಅಸಹನೀಯ ದುರ್ನಾತ ಹರಡಿದೆ. ಕೆರೆಯ ಅಂಚಿನಲ್ಲಿ ಮಾತ್ರವಲ್ಲದೆ ನೀರಿನ ಒಳಭಾಗದಲ್ಲೂ ಮಾಂಸದ ತುಣುಕುಗಳು ಹರಡಿಕೊಂಡಿರುವುದರಿಂದ ದನಕರುಗಳು ನೀರು ಕುಡಿಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಜಲಚರಗಳ ಮಾರಣಹೋಮ ನಡೆಯುವ ಭೀತಿ ಎದುರಾಗಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೇಳೂರು ಪಟ್ಟಣದ ಮಾಂಸದ ಅಂಗಡಿಗಳ ಮಾಲೀಕರು ನಿಯಮ ಗಾಳಿಗೆ ತೂರಿ ರಾತ್ರೋರಾತ್ರಿ ಕೆರೆಗೆ ತ್ಯಾಜ್ಯ ಸುರಿಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಪಿಡಿಓ ಅವರು ತಕ್ಷಣವೇ ಎಲ್ಲಾ ಮಾಂಸ ಮಾರಾಟಗಾರರನ್ನು ಕರೆಸಿ ನೋಟಿಸ್ ನೀಡಬೇಕು ಮತ್ತು ಬುದ್ಧಿವಾದ ಹೇಳಬೇಕು. ತಹಶೀಲ್ದಾರ್ ಅವರು ಖುದ್ದಾಗಿ ಮಧ್ಯಪ್ರವೇಶಿಸಿ ಇಂತಹ ಅಂಗಡಿಗಳ ಅಕ್ರಮ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶೇರ್ ಖಾನ್ ಕೋಟೆ ಕೆರೆಯ ನೀರಿನ ಮೇಲೆ ತ್ಯಾಜ್ಯ ತೇಲುತ್ತಿರುವ ವಿಷಯ ತಿಳಿದು ಬಂದಿದೆ. ಇದು ಅತ್ಯಂತ ಅಮಾನವೀಯ ಕೃತ್ಯ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಮಾಂಸದ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗುವುದು ಮತ್ತು ಕೆರೆಯ ಸ್ವಚ್ಛತೆಗೆ ತಕ್ಷಣದ ಕ್ರಮ ಕೈಗೊಳ್ಳಲಾಗುವುದು. – ಗೌಸ್ ಪೀರ್, ಪಿ.ಡಿ.ಓ, ಗ್ರಾಮ ಪಂಚಾಯಿತಿ.ಚೇಳೂರು
ಶೇರ್ ಖಾನ್ ಕೋಟೆ ಕೆರೆಯ ದುಸ್ಥಿತಿಯ ಬಗ್ಗೆ ಮಾಹಿತಿ ಬಂದಿದೆ. ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಅಕ್ರಮವಾಗಿ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. — ಶ್ವೇತಾ ಬಿ.ಕೆ., ತಹಶೀಲ್ದಾರ್, ಚೇಳೂರು.
ವರದಿ :ಯಾರಬ್. ಎಂ.




