ಧಾರವಾಡ: ಧಾರವಾಡದಲ್ಲಿ ಅಪಹರಣಕ್ಕೊಳಗಾಗಿದ್ದ ಇಬ್ಬರೂ ಮಕ್ಕಳು ಪಾರಾಗಿದ್ದಾರೆ. ಜೊಯಿಡಾ ದಾಂಡೇಲಿ ಪೊಲೀಸರ ಸುಪರ್ದಿಯಲ್ಲಿ ಮಕ್ಕಳಿದ್ದಾರೆ.
ಧಾರವಾಡ ನಗರದ ಕಮಲಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಇಬ್ಬರು ಮಕ್ಕಳನ್ನು ಸೋಮವಾರ ಮಧ್ಯಾಹ್ನ ಅಪಹರಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲೆ ಜೊಯಿಡಾ ಸಮೀಪ ಅಪಹರಣಕಾರನ ಬೈಕ್ ಅಪಘಾತಕ್ಕೀಡಾಗಿದೆ.ಇದರಿಂದ ಮಕ್ಕಳು ಪಾರಾಗಿದ್ದಾರೆ.
ಶಾಲೆಯಲ್ಲಿ ಊಟದ ಬಿಡುವಿನ ವೇಳೆಯಲ್ಲಿ ಬಂದಿದ್ದ ವ್ಯಕ್ತಿ ಮೂರನೇ ತರಗತಿಯ ವಿದ್ಯಾರ್ಥಿಗಳಾದ ಲಕ್ಷ್ಮಿ ಕರಿಯಪ್ಪನವರ ಮತ್ತು ತನ್ವೀರ್ ದೊಡ್ಡಮನಿ ಅವರನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದ. ಜೊಯಿಡಾ ಬಳಿ ಅಪಘಾತ ಸಂಭವಿಸಿದ್ದರಿಂದ ಅಪಹರಣಕಾರನ ತಲೆಗೆ ಪೆಟ್ಟಾಗಿದೆ.
ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯರು ವಿಚಾರಿಸಿದಾಗ ಮಕ್ಕಳು ವಿಷಯ ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಕ್ಕಳನ್ನು ಪೋಷಕರಿಗೆ ಒಪ್ಪಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.




