ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಮನರೇಗಾ ಹೆಸರು ಬದಲಾವಣೆ ವಿರುದ್ಧ ಬೃಹತ್ ಹೋರಾಟ ನಡೆಸಲಾಗುತ್ತದೆ. ಎಂದು ಘೋಷಣೆ ಮಾಡಿದೆ. ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ‘ವಿಕಸಿತ ಭಾರತ: ಜಿ ರಾಮ್ ಜಿ’ ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ.
ಕರ್ನಾಟಕ ಸರ್ಕಾರ ‘ವಿಕಸಿತ ಭಾರತ: ಜಿ ರಾಮ್ ಜಿ’ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ನಡೆಸಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಅಧಿವೇಶನದ ದಿನಾಂಕ ನಿಗದಿ ಮಾಡಲಾಗಿದೆ.
ಜನವರಿ 27 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ವಿಧಾನಸೌಧದಲ್ಲಿ ‘ವಿಕಸಿತ ಭಾರತ: ಜಿ ರಾಮ್ ಜಿ’ ಯೋಜನೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ನಡೆಸಲಾಗುತ್ತದೆ. ಈ ಕುರಿತು ವಿವರವಾದ ಚರ್ಚೆಗಳು ನಡೆಯಲಿದ್ದು, ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಅಧಿವೇಶನವನ್ನು ಸ್ವಾಗತಿಸಿವೆ.
ಕಾಂಗ್ರೆಸ್ ಹೋರಾಟ: ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ “ಮನರೇಗಾ ಉಳಿಸಿ ಹೋರಾಟ”ದ ಪೂರ್ವಸಿದ್ಧತಾ ಸಭೆ ನಡೆಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು. ಈಗಾಗಲೇ ಕಾಂಗ್ರೆಸ್ ಈ ಕುರಿತು ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ನೀಡಿದೆ.
ಸಿದ್ದರಾಮಯ್ಯ ಮಾತನಾಡಿ, “ಹಿಂದಿನ ಯುಪಿಎ ಸರ್ಕಾರ ಮನರೇಗಾ ಯೋಜನೆಯ ಮೂಲಕ ಕೋಟ್ಯಂತರ ಬಡಜನರಿಗೆ ಉದ್ಯೋಗದ ಹಕ್ಕನ್ನು ಕಾನೂನಾತ್ಮಕಗೊಳಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಎನ್‌ಡಿಎ ಸರ್ಕಾರ ಮನರೇಗಾ ಕೈಬಿಟ್ಟು, ವಿಬಿಜಿ ರಾಮ್ ಜಿ ಎಂಬ ಹೊಸ ಯೋಜನೆ ಜಾರಿ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
“ಗ್ರಾಮ ಸ್ವರಾಜ್ಯದ ಕನಸು ಕಂಡ ಮಹಾತ್ಮ ಗಾಂಧಿಯವರ ಹೆಸರೂ ಇಲ್ಲದ, ಉದ್ಯೋಗದ ಖಾತರಿಯನ್ನೂ ನೀಡದ ಈ ಯೋಜನೆಯಿಂದ ಕೂಲಿಕಾರ್ಮಿಕರು, ರೈತರು, ಮಹಿಳೆಯರ ಬದುಕು ದುಸ್ಥರಗೊಳ್ಳಲಿದೆ. ಮನರೇಗಾ ಮರುಜಾರಿಯಾಗುವ ವರೆಗೆ ಹೋರಾಟ ಕೈಬಿಡುವುದಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ನಮ್ಮ ನೇರ ಎಚ್ಚರಿಕೆ” ಎಂದು ಹೇಳಿದ್ದಾರೆ.




