ಬೆಳಗಾವಿ: ವಾಲ್ಮೀಕಿ ಭವನ ನಿರ್ಮಾಣ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದೆ. ದಲಿತ ಸಮುದಾಯದ ಸದಾಶಿವ ಭಜಂತ್ರಿ ಮನೆಗೆ ನುಗ್ಗಿ ಹಲ್ಲೆ ಮಾಡಲಾಗಿದೆ.
ಬೈಲಹೊಂಗಲ ತಾಲೂಕಿನ ದೇಶನೂರಿನಲ್ಲಿ ಘಟನೆ ನಡೆದಿದೆ. ಸದಾಶಿವ ಭಜಂತ್ರಿ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.
ಕಲ್ಲೆಸೆದು ಶೌಚಾಲಯ, ಮನೆಯ ಮಾಳಿಗೆ ಧ್ವಂಸಗೊಳಿಸಿದ್ದಾರೆ. ವಾಲ್ಮೀಕಿ ಭವನ ನಿರ್ಮಾಣದ ಜಾಗ ಸರ್ವೆಗೆ ಎಸ್.ಟಿ. ಸಮುದಾಯದ ಯುವಕರು ಬಂದಿದ್ದರು.
ವಾಲ್ಮೀಕಿ ಸಮುದಾಯ ಭವನಕ್ಕೆ ಸದಾಶಿವ ಭಜಂತ್ರಿ ಕುಟುಂಬ ವಿರೋಧ ವ್ಯಕ್ತಪಡಿಸಿದ್ದು, ಸಮುದಾಯ ಭವನ ನಿರ್ಮಾಣ ವಿರೋಧಿಸಿದ್ದಕ್ಕೆ ಸದಾಶಿವ ಕುಟುಂಬದವರ ಮೇಲೆ ಹಲ್ಲೆ ಮಾಡಲಾಗಿದೆ.
ಕಲ್ಲು ಕಟ್ಟಿಗೆಯಿಂದ ಹೊಡೆದು ಬಾಗಿಲು ಮುರಿದು ಒಳ ನುಗ್ಗಿದ್ದು, ಮಹಿಳೆ ಎನ್ನುವುದನ್ನು ಲೆಕ್ಕಿಸದೇ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಸ್ಥಳಕ್ಕೆ ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಡಿಯೋ ಪರಿಶೀಲಿಸಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಸದ್ಯ ದೇಶನೂರು ಗ್ರಾಮ ಬೂದಿ ಮುಚ್ಚಿದ ಕೆಂಡದಂತಿದೆ. ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.




