ತುರುವೇಕೆರೆ : ಜನವರಿ 20 ರಂದು ತುರುವೇಕೆರೆ ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.ಜಿ.ಮೋಹನ್ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ವಿವಿಧ ಸೇವಾ ಚಟುಚಟಿಕೆ ಹಾಗೂ ನಿವೃತ್ತ ಸೇನಾಧಿಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಎನ್. ಪರಮೇಶ್ವರಯ್ಯ ತಿಳಿಸಿದರು.
ಲಯನ್ಸ್ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸೇವೆಗೆ ಮತ್ತೊಂದು ಹೆಸರು ಎಂಬಂತೆ ಲಯನ್ಸ್ ಕ್ಲಬ್ ತುರುವೇಕೆರೆ ತಾಲೂಕಿನಲ್ಲಿ ನಿರಂತರ ಸೇವೆಯನ್ನು ಒದಗಿಸುತ್ತಾ ಬಂದಿದೆ. ಲಯನ್ಸ್ ಕ್ಲಬ್ 317 ಎ ಜಿಲ್ಲೆ ಜಿಲ್ಲಾ ರಾಜ್ಯಪಾಲರಾದ ಡಾ.ಜಿ. ಮೋಹನ್ ಅವರು ತಾಲೂಕಿಗೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ತುರುವೇಕೆರೆ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಸೇವಾ ಚಟುವಟಿಕೆ ಹಾಗೂ ನಿವೃತ್ತ ಸೇನಾಧಿಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜನವರಿ 20 ರಂದು ಮಧ್ಯಾಹ್ನ 2 ಗಂಟೆಯಿಂದ ಕಲ್ಪತರು ಆಶ್ರಮಕ್ಕೆ ಆಹಾರ ಸಾಮಗ್ರಿ, ಹೊದಿಕೆ ವಿತರಣೆ, ವಿಶೇಷಚೇತನ ಕಲಾವಿದೆಗೆ ವಿದ್ಯುತ್ ಚಾಲಿತ ಗಾಲಿಕುರ್ಚಿ ವಿತರಣೆ, ಅತ್ತಿಕುಳ್ಳೆಪಾಳ್ಯ ದೇವಸ್ಥಾನದ ಬಳಿ ಕ್ಯಾನ್ಸರ್ ತಪಾಸಣಾ ಶಿಬಿರ, ಹೆಚ್.ಪಿ.ವಿ. ಲಸಿಕಾ ಕಾರ್ಯಕ್ರಮ, ತುರುವೇಕೆರೆಯ ಲಯನ್ಸ್ ತಂಗುದಾಣದಲ್ಲಿ ಮಾನವೀಯ ಗೋಡೆ ಉದ್ಘಾಟನೆ, ಲಯನ್ಸ್ ಪಾರ್ಕಿನಲ್ಲಿ ಪರಿಸರ ಸಂರಕ್ಷಣೆಗಾಗಿ ಸಸಿ ನೆಡುವ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7 ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ವಿಶೇಷಚೇತನರಿಗೆ ಗಾಲಿಕುರ್ಚಿ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸರ್ಕಾರಿ ಆಸ್ಪತ್ರೆ ಟಿ.ಬಿ. ರೋಗಿಗಳಿಗೆ ಪೌಷ್ಟಿಕಾಂಶ ಆಹಾರ ಕಿಟ್ ವಿತರಣೆ, ಸರ್ಕಾರಿ ಶಾಲೆಗೆ ತಟ್ಟೆಲೋಟ ವಿತರಣೆ, ಅಶಕ್ತರಿಗೆ ಊರುಗೋಲು ವಿತರಣೆ ನಡೆಸಲಾಗುವುದು ಎಂದರು.

ಸಂಜೆ 7 ಗಂಟೆಗೆ ಲಯನ್ಸ್ ಭವನದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ 317 ಎ ಜಿಲ್ಲೆ ಜಿಲ್ಲಾ ರಾಜ್ಯಪಾಲರಾದ ಡಾ.ಜಿ. ಮೋಹನ್ ಉದ್ಘಾಟಿಸಲಿದ್ದು, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಹೆಲೆನ್ ಕೆಲೆನ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಿದ್ದಾರೆ. ಭಾರತೀಯ ಭೂಸೇನೆಯ ನಿವೃತ್ತ ಸೇನಾಧಿಕಾರಿ ತುರುವೇಕೆರೆಯ ಕರ್ನಲ್ ರಾಮಚಂದ್ರ ಕೆ.ಎ. ಅವರನ್ನು ಗೌರವಿಸಲಾಗುವುದು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಪುಟ ಕಾರ್ಯದರ್ಶಿ ಅಶೋಕ್ ಕೆ.ಕುಲಕರ್ಣಿ, ಖಜಾಂಚಿ ಎನ್.ಎಸ್.ನಾಗೇಶ್ವರರಾವ್, ಪ್ರಾಂತ್ಯಾಧ್ಯಕ್ಷ ರಾಜೇಶ್ ಎಸ್. ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆಂದರು.
ಗೋಷ್ಟಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎಂ. ಕುಮಾರಸ್ವಾಮಿ, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಧನಪಾಲ್, ವಲಯಾಧ್ಯಕ್ಷ ರಂಗನಾಥ್, ಪದಾಧಿಕಾರಿಗಳಾದ ಗಂಗಾಧರ ದೇವರಮನೆ, ಸುಮಾಮಲ್ಲಿಕ್, ರುದ್ರಯ್ಯ ಹಿರೇಮಠ, ಪ್ರದೀಪ್, ಪರಮೇಶ್ವರಸ್ವಾಮಿ, ಸಚಿನ್, ಲೋಕೇಶ್ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




