ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿ ಮುಗಳೂರು ಗ್ರಾಮದ ತೋಟವೊಂದರಲ್ಲಿ ಶೇಖರಿಸಿಟ್ಟಿದ್ದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಬಣವೆ ಭಸ್ಮಗೊಂಡು ಸುಮಾರು 80 ಸಾವಿರ ರೂ ನಷ್ಟವಾಗಿದೆ.
ಮುಗಳೂರು ಗ್ರಾಮದ ವಿಜಯಮ್ಮ ಬಿನ್ ಆರ್.ರಂಗಯ್ಯ ಅವರ ತೋಟದಲ್ಲಿ (ಸರ್ವೆ ನಂಬರ್ 250/1) ಶೇಖರಿಸಿಟ್ಟಿದ್ದ ಹುಲ್ಲಿನ ಬಣವೆಗೆ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿದೆ.
ತೋಟಕ್ಕೆ ತುಂಬಾ ಹತ್ತಿರವಿರುವ ವಿದ್ಯುತ್ ಪರಿವರ್ತಕದಲ್ಲಿ ಉಂಟಾದ ಕಿಡಿಯು ಹುಲ್ಲಿನ ಬಣವೆಗೆ ಬಿದ್ದು ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಸುಮಾರು 350 ಹೊರೆ ಹುಲ್ಲಿನ ಬಣವೆ ಇದ್ದು 75 ರಿಂದ 80 ಸಾವಿರ ರೂ ನಷ್ಟ ಸಂಭವಿಸಿದೆ.
ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿರುವುದನ್ನು ಕಂಡ ಅಕ್ಕಪಕ್ಕದ ತೋಟದಲ್ಲಿದ್ದ ಗ್ರಾಮಸ್ಥರು ತಕ್ಷಣ ಬೆಂಕಿ ನಂದಿಸಲು ಪ್ರಯತ್ನಿಸಿದ್ದಲ್ಲದೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಶೀಘ್ರ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಹುಲ್ಲಿನ ಬಣವೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಜಾನುವಾರುಗಳಿಗೆಂದು ಶೇಖರಿಸಿಟ್ಟಿದ್ದ ಮೇವು ನಾಶವಾಗಿದ್ದುದರಿಂದ ವಿಜಯಮ್ಮ ಕುಟುಂಬ ಕಂಗಾಲಾಗಿದೆ.
ಕೂಡಲೇ ತಾಲೂಕು ಆಡಳಿತ ಪರಿಹಾರ ಒದಗಿಸಿ ನೆರವಾಗಬೇಕೆಂದು ವಿಜಯಮ್ಮ ಮನವಿ ಮಾಡಿದ್ದಾರೆ.
ವರದಿ : ಗಿರೀಶ್ ಕೆ ಭಟ್




