ವಿಜಯಪುರ: ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಒಂದಿದೆ. ಜನವರಿ 27ರಂದು ವಿಜಯಪುರದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.
ಉದ್ಯೋಗ ನೀಡುವ ಕಂಪನಿಗಳು, ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಮೇಳದ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಜಿಲ್ಲಾ ಕೌಶಲ್ಯ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿ ಡಾ.ಆನಂದ ಕೆ. ಉದ್ಯೋಗ ಮೇಳದ ಸಿದ್ಧತೆಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ನಗರದ ದರ್ಬಾರ ಶಾಲೆಯ ಆವರಣದಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಹೆಚ್ಚಿನ ಕಂಪನಿ, ಅಭ್ಯರ್ಥಿಗಳು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯುವನಿಧಿ ಸೌಲಭ್ಯ ಪಡೆದುಕೊಳ್ಳುತ್ತಿರುವ 15,000ಕ್ಕೂ ಅಧಿಕ ಫಲಾನುಭವಿಗಳಿಗೆ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವಂತೆ ವಾಟ್ಸಪ್ ಮೂಲಕ ಸಂದೇಶ ಕಳಿಸಬೇಕು. ಉದ್ಯೋಗದಾತ ಕಂಪನಿಗಳ ನೋಂದಣಿಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ತಿಳಿಸಿದರು.
ಅಚ್ಚುಕಟ್ಟಾಗಿ ಉದ್ಯೋಗ ಮೇಳ ಆಯೋಜನೆ ಮಾಡಬೇಕಿದೆ. ಉದ್ಯೋಗದಾತ ಕಂಪನಿಗಳು, ಅಭ್ಯರ್ಥಿಗಳ ನೋಂದಣಿಗಾಗಿ ಆರಂಭಿಸಲಾದ ವೆಬ್ಸೈಟ್ ಬಗ್ಗೆ ಪ್ರಚಾರ ನೀಡಬೇಕು. ಜಿಲ್ಲೆಯ ವಿವಿಧ ಕಾಲೇಜುಗಳಿಗೆ ಉದ್ಯೋಗ ಮೇಳದ ಕುರಿತು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮುಂಚಿತವಾಗಿ ನೋಂದಣಿ ಮಾಡದ ಅಭ್ಯರ್ಥಿಗಳು ಸಹ ಉದ್ಯೋಗ ಮೇಳದ ದಿನ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಬೇಕು. ಉದ್ಯೋಗ ಮೇಳದ ಸ್ಥಳ, ಕೌಂಟರ್ ಸೇರಿದಂತೆ ವಿವಿಧ ಮಾಹಿತಿಯನ್ನು ಯುವಕ/ ಯುವತಿಯರಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸುಮಾರು 130 ಕಂಪನಿಗಳು ಉದ್ಯೋಗ ಮೇಳಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈ ಕಂಪನಿಗಳಿಗೆ ಕೌಂಟರ್, ಸಂದರ್ಶನಕ್ಕೆ ಸ್ಥಳ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಬೇಕಿದೆ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಂದ ಯಾವುದೇ ಶುಲ್ಕವನ್ನುಸಂಗ್ರಹ ಮಾಡಬಾರದು ಎಂದರು.
ಉದ್ಯೋಗ ಮೇಳ ನಡೆಯುವ ಸ್ಥಳದಲ್ಲಿ ಸ್ವಚ್ಛತೆಗೆ ಗಮನ ನೀಡಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಉದ್ಯೋಗ ಮೇಳದ ಕುರಿತು ಜಾಹೀರಾತು ಮೂಲಕ ವ್ಯಾಪಕ ಪ್ರಚಾರವನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಉದ್ಯೋಗ ಮೇಳದ ಕುರಿತು ಪ್ರಚಾರ ಮಾಡಬೇಕು ಎಂದು ಸೂಚಿಸಲಾಗಿದೆ. ಉದ್ಯೋಗ ಮೇಳದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ಸಹ ಈಗಾಗಲೇ ರಚನೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾಧ್ಯಮಗಳ ಜೊತೆ ಮಾತನಾಡಿ, “ಈ ಉದ್ಯೋಗ ಮೇಳದ ಯಶಸ್ಸಿಗೆ ಎಲ್ಲಾ ಅಧಿಕಾರಿಗಳು ಸಮಸ್ವಯದಿಂದ ಕೆಲಸ ಮಾಡಬೇಕು. ಸಮಸ್ಯೆಗಳ ಪರಿಹಾರಕ್ಕಾಗಿ ಸಹಾಯವಾಣಿಯನ್ನು ಸ್ಥಾಪಿಸಲಾಗುತ್ತದೆ” ಎಂದರು.
“ಉದ್ಯೋಗ ಮೇಳದ ಸ್ಥಳದಲ್ಲಿ ನೋಂದಣಿ, ಮಾಹಿತಿ, ಮಾರ್ಗದರ್ಶನ ನೀಡುವ ಮಳಿಗೆಗಳನ್ನು ತೆರೆಯಲಾಗುತ್ತದೆ. ಉದ್ಯೋಗ ಮೇಳಕ್ಕೆ ಪ್ರವೇಶ ಉಚಿತವಾದ ಕಾರಣ ಹೆಚ್ಚಿನ ನಿರುದ್ಯೋಗಿ ಯುವಕ/ ಯುವತಿಯರು ಆಗಮಿಸುವ ನಿರೀಕ್ಷೆ ಇದೆ” ಎಂದು ಹೇಳಿದರು.




