ಗದಗ: ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ತನಗೆ ದಯಾಮರಣ ನೀಡುವಂತೆ ಗ್ರಾಮಲೆಕ್ಕಿಗನೊಬ್ಬ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವಂತ ಘಟನೆ ಗದಗದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ಕುರಕಟ್ಟಿ ಎಂಬುವರೇ ಹೀಗೆ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಂತ ವಿಎ ಆಗಿದ್ದಾರೆ.
ತಮಗೆ ಮೇಲಧಿಕಾರಿಗಳು ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ. ನನ್ನ ವೇತನವನ್ನು ತಡೆಹಿಡಿಯಲಾಗಿದೆ. ಹೀಗಾಗಿ ಜೀವನೋಪಾಯಕ್ಕೂ ಕಷ್ಟವಾಗಿದೆ. ಜೀವನ ನಿರ್ವಹಣೆ ಮಾಡದಂತ ಪರಿಸ್ಥಿತಿಯಲ್ಲಿ ನಾನಿದ್ದೇನೆ. ಈ ಹಿನ್ನಲೆಯಲ್ಲಿ ನನಗೆ ದಯಾಮರಣ ನೀಡುವಂತೆ ರಾಷ್ಟ್ರಪತಿಗಳನ್ನು ಪತ್ರದಲ್ಲಿ ಕೋರಿದ್ದಾರೆ.
ಇದಷ್ಟೇ ಅಲ್ಲದೇ ಕಂದಾಯ ಇಲಾಖೆಯ ತಾಲ್ಲೂಕು ಆಡಳಿತ ವ್ಯವಸ್ಥೆ ಹಾಗೂ ಮೇಲಧಿಕಾರಿಗಳು ಇಲಾಖೆ ಕೆಲಸ ಸಮರ್ಪಕವಾಗಿ ನಿರ್ವಹಿಸೋದಕ್ಕೆ ಬಿಡುತ್ತಿಲ್ಲ. ವಿನಾ ಕಾರಣ ಮೇಲಿನಿಂದ ಮೇಲೆ ನೋಟಿಸ್ ಸೇರಿದಂತೆ ಇತರೆ ಕಿರುಕುಳ ನೀಡಲಾಗುತ್ತಿದೆ ಎಂದಿದ್ದಾರೆ.
ನನ್ನ ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ. ನನಗೂ ಆರೋಗ್ಯ ಸರಿಯಿಲ್ಲ. ವೇತನವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿ ಬಿಟ್ಟಿದೆ. ಇದರ ಬದಲು ದಯಾಮರಣ ಕಲ್ಪಿಸುವಂತೆ ಗ್ರಾಮಲೆಕ್ಕಿಗ ಯೋಗೇಶ್ ಕೋರಿದ್ದಾರೆ.




