ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆ (ಎಪಿವೈ) ಮುಂದುವರೆಸಲು ಅನುಮೋದನೆ ನೀಡಿದೆ. ಲಕ್ಷಾಂತರ ಕಡಿಮೆ ಆದಾಯದ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆ ಸಹಾಯಕವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು 2030-31ರ ಹಣಕಾಸು ವರ್ಷದವರೆಗೆ ಮುಂದುವರಿಸಲು ಅನುಮೋದನೆ ನೀಡಲಾಗಿದೆ.
ಈ ಯೋಜನೆಯು ಸರ್ಕಾರದ ಬೆಂಬಲದೊಂದಿಗೆ 2030-31ರವರೆಗೆ ಮುಂದುವರಿಯುತ್ತದೆ. ಅಸಂಘಟಿತ ವಲಯದ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವುದು, ಸಾಮರ್ಥ್ಯ ವೃದ್ಧಿ ಸೇರಿದಂತೆ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಚಾರ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ.
ಯೋಜನೆಯ ಕಾರ್ಯಸಾಧ್ಯತೆಯ ಅಗತ್ಯತೆಗಳನ್ನು ಪೂರೈಸಲು ಮತ್ತು ಅದರ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಗ್ಯಾಪ್ ಫಂಡಿಂಗ್ ಮಾಡಲಾಗುತ್ತದೆ.
ಪ್ರಮುಖ ಪರಿಣಾಮ
ಲಕ್ಷಾಂತರ ಕಡಿಮೆ ಆದಾಯದ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದ ಆದಾಯದ ಭದ್ರತೆಯನ್ನು ಖಚಿತಪಡಿಸುತ್ತದೆ.
ಹಣಕಾಸು ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತವು ‘ಪಿಂಚಣಿ ಸಮಾಜ’ವಾಗಿ ಬದಲಾಗಲು ಬೆಂಬಲ ನೀಡುತ್ತದೆ.
ಸುಸ್ಥಿರ ಸಾಮಾಜಿಕ ಭದ್ರತೆಯನ್ನು ಒದಗಿಸುವ ಮೂಲಕ ‘ವಿಕಸಿತ ಭಾರತ @2047’ ದೃಷ್ಟಿಕೋನವನ್ನು ಬಲಪಡಿಸುತ್ತದೆ.
ಯೋಜನೆ ವಿವರ; ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದ ಆದಾಯ ಭದ್ರತೆಯನ್ನು ಒದಗಿಸುವ ಉದ್ದೇಶದೊಂದಿಗೆ ಅಟಲ್ ಪಿಂಚಣಿ ಯೋಜನೆಯನ್ನು ಮೇ 9, 2015ರಂದು ಪ್ರಾರಂಭಿಸಲಾಯಿತು.
ಯೋಜನೆಯು ಚಂದಾದಾರರ ಕೊಡುಗೆಯ ಆಧಾರದ ಮೇಲೆ 60 ವರ್ಷ ವಯಸ್ಸಿನ ನಂತರ ತಿಂಗಳಿಗೆ ಕನಿಷ್ಠ 1,000 ರೂ. ನಿಂದ 5,000 ರೂ.ವರೆಗೆ ಖಾತರಿಪಡಿಸಿದ ಪಿಂಚಣಿಯನ್ನು ಈ ಯೋಜನೆಯಡಿ ನೀಡುತ್ತದೆ.
ಜನವರಿ 19, 2026ರ ಮಾಹಿತಿಯಂತೆ 8.66 ಕೋಟಿಗೂ ಹೆಚ್ಚು ಚಂದಾದಾರರು ಈ ಪಿಂಚಣಿ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದು, ಇದು ಸಾಮಾಜಿಕ ಭದ್ರತಾ ಚೌಕಟ್ಟಿನ ಪ್ರಮುಖ ಆಧಾರಸ್ತಂಭವಾಗಿದೆ.
ನಿರಂತರ ಜಾಗೃತಿ, ಸಾಮರ್ಥ್ಯ ವೃದ್ಧಿ ಮತ್ತು ಯೋಜನೆಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹಣಕಾಸಿನ ಅಂತರವನ್ನು ಸರಿದೂಗಿಸಲು ಸರ್ಕಾರ ನಿರಂತರವಾಗಿ ಬೆಂಬಲವನ್ನು ನೀಡುತ್ತಿದೆ.




