ಸಿರುಗುಪ್ಪ : ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಜ.22 ಸಾಯಂಕಾಲ ಪೋಲೀಸ್ ಇಲಾಖೆಯಿಂದ ಜನ ಸಂಪರ್ಕ ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಪನ್ನೇಕರ್ ಅವರು ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದರು.
ಸಭೆಯಲ್ಲಿ ಮಾತನಾಡಿದ ಸಾರ್ವಜನಿಕರು ತಾಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಾದ ಮಟ್ಕಾ, ಅಕ್ರಮ ಮರಳು ದಂಧೆ, ಜೂಜು, ಇಸ್ಪೀಟ್ ದಂಧೆ, ಅಕ್ರಮ ಪಡಿತರ ಅಕ್ಕಿ ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ.
ನಗರ ಸೇರಿದಂತೆ ತಾಲೂಕಿನೆಲ್ಲೆಡೆ ಅಕ್ರಮ ಮದ್ಯ ಮಾರಾಟದಂತಹ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದರೂ ಪೋಲೀಸರು ಮಾತ್ರ ಏಕೆ ಮೌನವಹಿಸಿದ್ದಾರೆ ಎಂಬುದರ ಬಗ್ಗೆ ಕಾರಣ ತಿಳಿಯುತ್ತಿಲ್ಲವೆಂದು ಪ್ರಶ್ನಿಸಿದರು.
ನಗರದಿಂದ ಇಬ್ರಾಹಿಂಪುರ ಗ್ರಾಮದ ತಾಲೂಕು ಗಡಿಭಾಗದವರೆಗೂ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿ ಕುಂಟುತ್ತಾ ಸಾಗಿದ್ದು, ರಸ್ತೆ ಅಪಘಾತದಲ್ಲಿ ಹಲವರು ಸಾವಿಗೀಡಾಗಿದ್ದಾರೆ.
ಆದ್ದರಿಂದ ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಸಂಬಂದಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಗ್ಗೂರು ಗ್ರಾಮದಲ್ಲಿನ ರಸ್ತೆ ಅವಸ್ಥೆಯನ್ನು ಸರಿಪಡಿಸಬೇಕು.
ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ ರಕ್ಷಣೆ, ಶಾಲಾ ಕಾಲೇಜುಗಳಿರುವ ತಾಲೂಕು ಕ್ರೀಡಾಂಗಣ, ಮುಖ್ಯ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯೊಂದಿಗೆ ರಕ್ಷಣೆಗೆ ಮುಂದಾಗಬೇಕು.
ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ದನಿಯೆತ್ತಿದವರ ಮೇಲೆ ಅಕ್ರಮವಾಗಿ ರೌಡಿಶೀಟರ್, ಕಾನೂನು ಬೆದರಿಕೆ, ಅಕ್ರಮ ದಂಧೆಕೋರರಿಂದ ಜೀವ ಬೆದರಿಕೆಯನ್ನು ಒಡ್ಡಲಾಗುತ್ತಿದೆ.
ಠಾಣೆಗಳು ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಲಂಚಾವತಾರ ಹೆಚ್ಚಿದ್ದು, ಕಾನೂನು ರಕ್ಷಕರೇ ಭಕ್ಷರಾಗುತ್ತಿರುವುದರಿಂದ ಯಾರಿಗೇನು ಹೇಳಿದರೆ ಏನು ಪ್ರಯೋಜನವೆಂಬಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಆದರೂ ನಿಮ್ಮಂತಹ ಮೇಲಾಧಿಕಾರಿಗಳ ಮೇಲೆ ನಂಬಿಕೆಯನ್ನಿಟ್ಟು ಜಿಲ್ಲಾ ಮಟ್ಟದಲ್ಲೂ ಅಲೆಯುತ್ತಿದ್ದೇವೆ. ಇಲ್ಲಿನ ಅಕ್ರಮಗಳ ಬಗ್ಗೆ ದೂರು ನೀಡಿದರೆ ಇಲ್ಲಿನ ಅಧಿಕಾರಿಗಳು ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ.
ಈ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕೆಲವು ಪೋಲೀಸ್ ಸಿಬ್ಬಂದಿಗಳು, ಅಧಿಕಾರಿಗಳು ಪ್ರೋತ್ಸಾಹಿಸಿಕೊಂಡು ಬರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಎಲ್ಲಾ ಸಮಸ್ಯೆಗಳನ್ನು ಶಾಂತಚಿತ್ತದಿಂದ ಆಲಿಸಿದ ಎಸ್.ಪಿ. ಸುಮನ್ ಪನ್ನೇಕರ್ ಅವರು ನೀವು ತಿಳಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಶ್ರಮವಹಿಸುತ್ತೇನೆ. ವಿಚಾರಣೆ ನಡೆಸಿ ನಮ್ಮ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು.
ಸಮಾಜದಲ್ಲಿ ಶಾಂತಿ ಸುವವ್ಯಸ್ಥೆಗೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆಂದು ತಿಳಿಸಿದರು.
ಇದೇ ವೇಳೆ ಸಿರುಗುಪ್ಪ ಉಪ ವಿಭಾಗ ಪೋಲೀಸ್ ಉಪಾಧೀಕ್ಷರಾದ ಮಾಲತೇಶ ಕೂನಬೇವ ಸೇರಿದಂತೆ ಪೋಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




