ಲಖನೌ: ಅಂಗವಿಕಲ ಕೊಟಾದಡಿ ಮೆಡಿಕಲ್ ಸೀಟ್ ಪಡೆಯಲು ಯುವಕನೊಬ್ಬ ತನ್ನ ಕಾಲನ್ನೇ ಕತ್ತರಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದ ಯುವಕ ಪದೇ ಪದೇ ನೀಟ್ ಪರೀಕ್ಷೆಯಲ್ಲಿ ವಿಫಲನಾಗುತ್ತಿದ್ದ. ಬೇರೆ ದಾರಿ ಕಾಣದೇ ಅಂಗವಿಕಲ ಕೋಟಾದಡಿ ಸೀಟು ಪಡೆಯಲು ಪ್ಲಾನ್ ಮಾಡಿ ಇಂತಹ ಎಡವಟ್ಟು ಮಾಡಿಕೊಂಡಿದ್ದಾನೆ.
ಉತ್ತರ ಪ್ರದೇಶದ ಲಖನೌ ಬಳಿಯ ಜೌವಣಪುರ ನಗರದ ಸೂರಜ್ ಭಾಸ್ಕರ್ ಎಂಬ 21 ವರ್ಷದ ಯುವಕ ಅಂಗವಿಕಲ ಕೋಟಾಡಡಿ ಮೆಡಿಕಲ್ ಸೀಟ್ ಪಡೆಯಲು ತನ್ನ ಕಾಲನ್ನೇ ಕತ್ತರಿಸಿಕೊಂಡಿರುವ ವ್ಯಕ್ತಿ. ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಸೀಟ್ ಪಡೆಯಲು ಇಂತಹ ಸರ್ಕಸ್ ಮಾಡಿ ತನ್ನ ಜೀವಕ್ಕೆ ಅಪಾಯ ತಂದುಕೊಂಡಿದ್ದಾನೆ.
ಸೂರಜ್ ಭಾಸ್ಕರ್ ಡಾಕ್ಟರ್ ಆಗಬೇಕು ಎಂಬ ಕನಸಿನೊಂದಿಗೆ ಎರಡು ಬಾರಿ ನೀಟ್ ಪರಿಕ್ಷೆ ಬರೆದರೂ ಸೆಲೆಕ್ಟ್ ಆಗಿರಲಿಲ್ಲ. ಹಾಗಾಗಿ ಮೆಡಿಕಲ್ ಸೀಟ್ ಸಿಕ್ಕಿರಲಿಲ್ಲ. ಇದರಿಂದ ನಿರಾಶನಾಗಿದ್ದ ಆತ ತನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಪದೇ ಪದೇ ಡೈರಿಯಲ್ಲಿ ತಾನು ಡಾಕ್ಟರ್ ಆಗುತ್ತೇನೆ ಎಂದು ಬರೆದಿಡುತ್ತಿದ್ದನಂತೆ.
ಎರಡು ಬಾರಿ ನೀಟ್ ನಲ್ಲಿ ಆಯ್ಕೆಯಾಗದಿದ್ದಾಗ ಹೇಗಾದರೂ ಮಾಡಿ ಮೆಡಿಕಲ್ ಸೀಟ್ ಗಿಟ್ಟಿಸಿಕೊಳ್ಳುಲೇಬೇಕು ಎಂದು ಯೋಚಿಸಿ ಅಂಗವಿಕಲ ಕೋಟಾದಡಿ ಸೀಟ್ ಪಡೆಯಲು ತನ್ನ ಎಡಗಾಲನ್ನು ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಅಪರಿಚಿತರು ಏರಿಯಾದಲ್ಲಿ ಬಂದು ಗಲಾಟೆ ಮಾಡಿ ನನ್ನ ಕಾಲನ್ನು ಕತ್ತರಿಸಿದ್ದಾರೆ. ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಸೂರಜ್ ಹೇಳಿದ್ದ. ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ನಡೆಸಿದಾಗ ಆತ ಸುಳ್ಳು ಹೇಳಿರುವುದು ಬಯಲಾಗಿದೆ.
ಅಲ್ಲದೇ ಸೂರಜ್ ಸಹೋದರನನ್ನು ವಿಚಾರಿಸಿದಾಗ ಮೆಡಿಕಲ್ ಸೀಟ್ ಗಾಗಿ ಕಾಲು ಕತ್ತರಿಸಿಕೊಂಡಿರುವುದು ಹಾಗೂ ಆತ ಡೈರಿಯಲ್ಲಿ ಬರೆದಿಡುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದಾನೆ.
ವೈದ್ಯನಾಗಬೇಕು ಎಂಬ ಹಂಬಲದಿಂದ ಅಂಗವಿಕಲ ಕೋಟಾದಡಿ ಮೆಡಿಕಲ್ ಸೀಟ್ ಪಡೆಯಲು ಕಾಲನ್ನೇ ಕತ್ತರಿಸಿಕೊಂಡಿರುವ ಸೂರಜ್ ಜೌವಣಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭಿರವಾಗಿದೆ. ಚಿಕಿತ್ಸೆ ಮುಂದುವರೆದಿದೆ.




