ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆರೋಪಿಗಳಾದ ಎಡಿಜೆಪಿ ಅಮೃತ್ ಪಾಲ್ ಮತ್ತು ಹೆಡ್ ಕಾನ್ಸ್ಟೇಬಲ್ ಎಚ್. ಶ್ರೀಧರ್ ಗೆ ಸೇರಿದ 1.53 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ(ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ 545 ಪಿಎಸ್ಐಗಳ ನೇಮಕಾತಿ ಸಂಬಂಧ 2020-21 ಸಾಲಿನಲ್ಲಿ ಪೊಲೀಸ್ ನೇಮಕಾತಿ ವಿಭಾಗದಿಂದ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಫಲಿತಾಂಶದ ನಂತರ ಪರೀಕ್ಷೆಯಲ್ಲಿ ವಂಚನೆ, ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದವು.
ಪೊಲೀಸ್ ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ಸ್ ಪೋಲಿಸ್ ಠಾಣೆ ಮತ್ತು ಸಿಐಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಇದರ ಆಧಾರದ ಮೇಲೆ ಇಡಿ ತನಿಖೆ ಕೈಗೊಂಡಿದ್ದು, ಪೊಲೀಸ್ ನೇಮಕಾತಿ ವಿಭಾಗದ ಎಡಿಜೆಪಿಯಾಗಿದ್ದ ಅಮೃತ್ ಪಾಲ್ ಉತ್ತರ ಪತ್ರಿಕೆಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಂಗೆ ಅನಧಿಕೃತವಾಗಿ ಪ್ರವೇಶಿಸಲು ನಡೆದ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಗೊತ್ತಾಗಿತ್ತು.
ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಮತ್ತು ಸಹಚರರು ಅನರ್ಹ ಅಭ್ಯರ್ಥಿಗಳ ಒಎಂಆರ್ ಶೀಟ್ ಗಳನ್ನು ತಿದ್ದಲು ಅವಕಾಶ ಮಾಡಿಕೊಟ್ಟಿದ್ದರು. ಆರೋಪಿಗಳು ಪ್ರತಿಯೊಬ್ಬರಿಂದ 30 ಲಕ್ಷದಿಂದ 70 ಲಕ್ಷದವರೆಗೆ ಲಂಚ ಸಂಗ್ರಹಿಸಿರುವುದು ಪ್ರಕರಣದ ತನಿಖೆಯಲ್ಲಿ ಗೊತ್ತಾಗಿದೆ.




