ಬೆಂಗಳೂರು: ಯುವತಿಯ ಖಾಸಗಿ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ ಘಟನೆ ನಡೆದಿದೆ.
19 ವರ್ಷದ ಯುವತಿ ನೀಡಿದ ದೂರಿನ ಅನ್ವಯ ಕೇಂದ್ರ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಯುವತಿ ತನ್ನ ಪ್ರಿಯಕರನಿಗೆ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾಳೆ.
ನಂತರ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಯುವತಿಗೆ ಕರೆ ಮಾಡಿದ ವ್ಯಕ್ತಿ ಆಕೆಯ ಖಾಸಗಿ ಫೋಟೋಗಳನ್ನು ಕಳುಹಿಸಿ ಒಂದು ಲಕ್ಷ ರೂ. ಕೊಡದಿದ್ದರೆ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ.
ಇದರಿಂದ ಆತಂಕಗೊಂಡ ಯುವತಿ ಪ್ರಿಯಕರನ ಜೊತೆ ಚರ್ಚಿಸಿದ್ದಾಳೆ. ನಂತರ ಕರೆ ಮಾಡಿದ ವ್ಯಕ್ತಿಗೆ ಪ್ರಿಯಕರನಿಂದ ಒಂದು ಲಕ್ಷ ರೂ. ಕೊಡಿಸಿದ್ದಾಳೆ. ನಂತರ ಅಪರಿಚಿತ ವ್ಯಕ್ತಿ ಯುವತಿಗೆ ಕರೆ ಮಾಡಿ ಹೆಚ್ಚಿನ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾನೆ.
ಪ್ರಿಯಕರನಿಗೆ ಕಳುಹಿಸಿದ ಖಾಸಗಿ ಫೋಟೋ ಅಪರಿಚಿತ ವ್ಯಕ್ತಿಗೆ ಹೇಗೆ ದೊರೆಯಿತು ಎಂದು ಮೊದಲು ಪ್ರಿಯಕರನ ಮೇಲೆಯೇ ಯುವತಿ ಅನುಮಾನ ವ್ಯಕ್ತಪಡಿಸಿದ್ದಾಳೆ. ತನಿಖೆ ನಡೆಸಿದಾಗ ಆತನಿಂದ ಬಹಿರಂಗವಾಗಿಲ್ಲ ಎನ್ನುವುದು ಗೊತ್ತಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.




