ತುರುವೇಕೆರೆ: ಮನುಷ್ಯನ ಯಶಸ್ಸಿಗೆ ಸಂಸ್ಕಾರ ಹಾಗೂ ಮೌಲ್ಯಯುತ ಶಿಕ್ಷಣ ದಾರಿದೀಪವಿದ್ದಂತೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ತಿಳಿಸಿದರು.
ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಚೈತನ್ಯ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ನ ಕೃಷ್ಣಾಸ್ ಪ್ರೀಸ್ಕೂಲ್ ಆಯೋಜಿಸಿದ್ದ ಕಿನ್ನರ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಸಂಸ್ಕಾರ, ಮೌಲ್ಯಗಳು, ಪಾರಂಪರಿಕ ಸಂಸ್ಕೃತಿ, ಆಚಾರ ವಿಚಾರಗಳು ಪಾಶ್ಚಾತ್ಯ ಅಂಧಾನುಕರಣೆಯಲ್ಲಿ ಕಣ್ಮರೆಯಾಗಿದೆ. ಈ ಸಂದರ್ಭದಲ್ಲಿ ಕೃಷ್ಣಾಸ್ ಪ್ರೀಸ್ಕೂಲ್ ಮಗುವಿನ ಬೆಳವಣಿಗೆಗೆ ಪ್ರಾಥಮಿಕ ಹಂತದಲ್ಲಿ ಬೇಕಾದಂತಹ ಅಗತ್ಯ, ಅತ್ಯಮೂಲ್ಯ ತಳಪಾಯವನ್ನು ಕಟ್ಟಿಕೊಡುವಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಭಗವದ್ಗೀತೆ, ಶ್ಲೋಕ, ಮಕ್ಕಳ ಹಾಡುಗಳನ್ನು ಹೇಳಿಕೊಟ್ಟು, ನಮ್ಮ ಪಾರಂಪರಿಕ ಹಬ್ಬಗಳು, ರಾಷ್ಟ್ರೀಯ ಹಬ್ಬಗಳ ಬಗ್ಗೆ ಅರಿವನ್ನು ಮೂಡಿಸಿ ಮಕ್ಕಳಲ್ಲಿ ಸಂಸ್ಕಾರ, ಸಂಪ್ರದಾಯವನ್ನೂ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ವಿದ್ಯೆ ಕದಿಯಲಾಗದ ಸಂಪತ್ತು. ಹಣ ಕಳುವಾಗಬಹುದು, ಆಸ್ತಿ, ಅಧಿಕಾರ ನಷ್ಟವಾಗಬಹುದು, ಆದರೆ ಜ್ಞಾನ ಯಾರೂ ಕದಿಯಲಾಗುವುದಿಲ್ಲ. ಪ್ರಸ್ತುತ ಶಿಕ್ಷಣ ವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚು ಉನ್ನತೀಕರಣಗೊಳ್ಳುತ್ತಿದೆ. ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಶಾಲೆ, ಕಾಲೇಜಿನಿಂದ ಹೊರಬಂದಾಗ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಉದ್ಯೋಗಕ್ಕಾಗಿ ನಗರ ಪ್ರದೇಶದ ಮಕ್ಕಳ ಜೊತೆ ಹೋರಾಟ ನಡೆಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರತಿಭಾವಂತರಿದ್ದಾರೆ, ಆ ಪ್ರತಿಭೆಯನ್ನು ಹೊರತೆಗೆದು ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಿ ಉನ್ನತ ಮಟ್ಟದಲ್ಲಿ ಯಶಸ್ಸನ್ನು ಸಾಧಿಸುವ ಹಿನ್ನೆಲೆಯಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಧನಾತ್ಮಕ, ಸ್ಥೈರ್ಯಯುತ ಶಿಕ್ಷಣ ನೀಡುವತ್ತ ಶಾಲೆ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕೃಷ್ಣಾಸ್ ಪ್ರೀಸ್ಕೂಲ್ ಶಾಲೆಯು ಶೈಕ್ಷಣಿಕ ಹಾಗೂ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪುಟಾಣಿ ಮಕ್ಕಳು ವೀರಗಾಸೆ ಹಾಗೂ ಕಾಂತಾರ ಚಿತ್ರದ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ಹಾಗೂ ಪೋಷಕರು ರಾಜ್ಯದ ವಿವಿಧ ಜಿಲ್ಲೆಯ ಸಂಸ್ಕೃತಿಯನ್ನು ಸಾರುವಂತಹ ವೇಷಭೂಷಣದಲ್ಲಿ ನೃತ್ಯ ನಡೆಸಿಕೊಟ್ಟದ್ದು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು. ಚೈತನ್ಯ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ದಂತ ವೈದ್ಯ ಡಾ.ನವೀನ್, ತಾಲೂಕು ಒಕ್ಕಲಿಗ ಮಹಿಳಾ ಸಮಾಜದ ನಿರ್ದೇಶಕಿ ತ್ರಿವೇಣಿಮಲ್ಲಿಕಾರ್ಜುನ್, ಬಿಆರ್.ಸಿ. ಸುರೇಶ್, ಶಾಲೆಯ ಮುಖ್ಯಶಿಕ್ಷಕಿ ಸುಷ್ಮಾ ಚೈತನ್ಯ, ಕೃಷ್ಣ ಚೈತನ್ಯ, ಲಲಿತಾರಾಮಚಂದ್ರ, ಉಷಾ ಶ್ರೀನಿವಾಸ್ ಹಾಗೂ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




