ತುರುವೇಕೆರೆ : ತಾಲೂಕಿನ ಮಾವಿನಕೆರೆ ಗ್ರಾಮ ಪಂಚಾಯ್ತಿಯಲ್ಲಿ ಭಾರತ ಗಣರಾಜ್ಯೋತ್ಸವದ ದಿನದಂದು ವಿಶೇಷವಾಗಿ ವಿಬಿ ಜಿ ರಾಮ್ ಜಿ ವಿಶೇಷ ಸಭೆಯನ್ನು ಏರ್ಪಡಿಸಿ ಗ್ರಾಮೀಣ ಜನರಿಗೆ ಕಾಯ್ದೆಯ ಬಗ್ಗೆ ಅರಿವು ಮೂಡಿಸಲಾಯಿತು.
ಗ್ರಾಮ ಪಂಚಾಯ್ತಿ ಪಿಡಿಒ ಉಮೇಶ್ ಕಾಯ್ದೆಯ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಈ ಹಿಂದೆ ಇದ್ದ ಮನರೇಗಾ ಉದ್ಯೋಗ ಖಾತರಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು, ಹೊಸದಾಗಿ ಗ್ರಾಮೀಣ ಉದ್ಯೋಗ ವ್ಯವಸ್ಥೆಯನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ವಿಬಿ ಜಿ ರಾಮ್ ಜಿ (ವಿಕಸಿತ ಭಾರತ, ರೋಜ್ ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) ಹೆಸರಿನಲ್ಲಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯನ್ವಯ ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ಉದ್ಯೋಗವನ್ನು ಖಾತ್ರಿಗೊಳಿಸುತ್ತದೆ ಎಂದರು.

ವಿಬಿ ಜಿ ರಾಮ್ ಜಿ ಕಾಯ್ದೆಯು ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ ನೀಡಿ, ಸ್ಥಳೀಯವಾಗಿ ಬಾಳಿಕೆ ಬರುವ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸುವ, ತಂತ್ರಜ್ಞಾನ ಆಧಾರಿತ ಪಾರದರ್ಶಕ ವ್ಯವಸ್ಥೆಯಾಗಿದೆ. ವಿಬಿ ಜಿ ರಾಮ್ ಜಿ ಕಾಯ್ದೆಯು ಗ್ರಾಮೀಣ ಕುಟುಂಬಗಳ ವಾರ್ಷಿಕ ಆದಾಯವನ್ನು ಹೆಚ್ಚಿಸಲು ಮತ್ತು ವಲಸೆಯನ್ನು ತಡೆಗಟ್ಟಲು ಸಹಕಾರಿಯಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಆದ್ಯತೆ ನೀಡಲಾಗುವುದು, ಇದರಲ್ಲಿ ಹಳೆಯ ಕೆರೆಗಳ ಪುನಶ್ಚೇತನ, ಹೂಳೆತ್ತುವುದು, ಚೆಕ್ ಡ್ಯಾಂ ನಿರ್ಮಾಣ ಮತ್ತು ಕೃಷಿಗೆ ಪೂರಕವಾದ ನೀರಾವರಿ ಕಾಲುವೆಗಳ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಹಳ್ಳಿಗಳ ನಡುವಿನ ಸಂಪರ್ಕವನ್ನು ಸುಧಾರಿಸಲು ಗ್ರಾಮೀಣ ರಸ್ತೆಗಳ ನಿರ್ಮಾಣ, ಶಾಲಾ ಕಟ್ಟಡಗಳ ದುರಸ್ಥಿ, ಅಂಗನವಾಡಿಗಳಂತಹ ಸಾರ್ವಜನಿಕ ಆಸ್ತಿಗಳನ್ನು ಅಭಿವೃದ್ದಿಪಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅಕ್ರಮ ತಡೆಗಟ್ಟಲು, ಪಾರದರ್ಶಕತೆ ಕಾಪಾಡಿಕೊಳ್ಳಲು ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗುವುದು. ಈಪಿಎಸ್ ಮೂಲಕ ಟ್ಯಾಗ್ ಮಾಡಲಾಗುತ್ತಿದ್ದು, ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿ ಅಕ್ರಮ ಪತ್ತೆ ಹಚ್ಚುವ ವ್ಯವಸ್ಥೆ ಈ ಯೋಜನೆಯಲ್ಲಿ ಜಾರಿಯಲ್ಲಿದೆ. ಹಳೆಯ ಜಾಬ್ ಕಾರ್ಡ್ ಗಳ ಬದಲಿಗೆ ಅತ್ಯಾಧುನಿಕ ಭದ್ರತಾ ವೈಶಿಷ್ಠ್ಯಗಳಿರುವ ವಿಕಸಿತ ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್ಗಳನ್ನು ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಿ.ಕೆ. ಸಂಧ್ಯಾ ಗೋವಿಂದರಾಜ್, ಉಪಾಧ್ಯಕ್ಷೆ ವಿನೋದ ಜಿ., ಕಾರ್ಯದರ್ಶಿ ಪುಷ್ಪ ಕೆ.ಬಿ. ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರುಗಳು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




