ತುರುವೇಕೆರೆ : ತಂಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ, ಅವ್ಯವಹಾರ ನಡೆದಿಲ್ಲ. ಸಂಘದ ಅಭಿವೃದ್ದಿಯನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಘಕ್ಕೆ ಕೆಟ್ಟ ಹೆಸರನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಆರೋಪಗಳು ಸತ್ಯಕ್ಕೆ ದೂರವಾದುದು. ಇಂತಹ ಇಲ್ಲಸಲ್ಲದ ಆರೋಪಗಳಿಗೆ ರೈತರು, ಷೇರುದಾರರು ಕಿವಿಗೊಡದೆ ಸಂಘದ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಸಂಘದ ಉಪಾಧ್ಯಕ್ಷ ಟಿ.ಆರ್. ಚನ್ನಕೇಶವ ತಿಳಿಸಿದರು.

ಸಂಘದ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಸಿದ್ದಲಿಂಗಪ್ಪನವರು ಆಯ್ಕೆಗೊಂಡ ನಂತರ ಸಂಘದ ಅಭಿವೃದ್ದಿಯ ವೇಗ ಹೆಚ್ಚಿದೆ. ಸಿದ್ದಲಿಂಗಪ್ಪನವರು ಸಂಘಕ್ಕೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸಿಕೊಡುವ ಮೂಲಕ ಸಂಘದ ಅಭಿವೃದ್ದಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಆದರೆ ಇದನ್ನು ಸಹಿಸದ ಕೆಲವರು ಸಂಘ ರೈತರಿಗೆ ಸಾಲ ನೀಡುತ್ತಿಲ್ಲ ಎಂದು ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ರಾಜ್ಯದ ಜನರಿಗೆ ತಿಳಿದಿರುವಂತೆ ನಬಾರ್ಡ್ ನಲ್ಲಿ ಶೇ. 57ರಷ್ಟು ಕಡಿಮೆ ಅನುದಾನ ದೊರಕಿಸುತ್ತಿದೆ. ದೊರಕಿರುವ ಶೇ. 43 ಅನುದಾನದಲ್ಲಿ ರೈತರಿಗೆ ಯಾವ ರೀತಿ ವಿತರಿಸಬೇಕು ಎಂಬ ಬಗ್ಗೆ, ಸರ್ಕಾರ ಸಾಲ ಮನ್ನಾ ಯೋಜನೆಯಲ್ಲಿ ಅನುದಾನ ಒದಗಿಸುವಲ್ಲಿ ಸ್ವಲ್ಪ ಆರ್ಥಿಕ ಸಮಸ್ಯೆ ಆಗಿದೆ ಎಂದು ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ, ನಬಾರ್ಡ್ ನಿಂದ ಹಣ ಬರದ ಕಾರಣ ಸಾಲಕ್ಕೆ ಅರ್ಜಿ ಸಲ್ಲಿಸಿರುವ ರೈತರಿಗೆ ಸಾಲ ನೀಡಲಾಗಿಲ್ಲವೇ ಹೊರತು ಸಂಘದ ಸಮಸ್ಯೆ ಏನೂ ಇಲ್ಲ. ಪ್ರಸ್ತುತ ವರ್ಷದಲ್ಲಿ ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪನವರು ಸಂಘಕ್ಕೆ 30 ಲಕ್ಷ ರೂ ಸಾಲ ಸೌಲಭ್ಯ ಒದಗಿಸಿದ್ದಾರೆ. ದಾಖಲಾತಿಗಳನ್ನು ಜಿಲ್ಲಾ ಸಹಕಾರ ಬ್ಯಾಂಕಿಗೆ ಕಳಿಸಿ, ರೈತರಿಗೆ ಪಹಣಿ ಆಧಾರದಲ್ಲಿ ಸಾಲ ಹಂಚಿಕೆ ಮಾಡಲಾಗುವುದು. ಆದರೆ ಸಮರ್ಪಕ ಮಾಹಿತಿಯ ಅರಿವಿಲ್ಲದ ಕೆಲವರು ಸಂಘಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿರುವುದು ದುರದೃಷ್ಟಕರ ಎಂದರು.
ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪನವರಿಗೆ ಸಹಕಾರಿ ಸಂಘದಲ್ಲಿ ಹಣ ಮಾಡಬೇಕಾದ ಅವಶ್ಯಕತೆ ಇಲ್ಲ, ಅವರಿಗೆ ಭಗವಂತ ಸಾಕಷ್ಟು ನೀಡಿದ್ದಾನೆ. ಸೇವಾ ಮನೋಭಾವದಿಂದ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಅಭಿವೃದ್ದಿಗೆ, ರೈತರ ಪ್ರಗತಿಗೆ ಪ್ರಾಮಾಣೀಕವಾಗಿ ಶ್ರಮಿಸುತ್ತಿದ್ದಾರೆ. ಸಿದ್ದಲಿಂಗಪ್ಪನವರ ಮೇಲೆ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಆರೋಪಗಳಲ್ಲಿ ಯಾವುದೇ ಹುರುಳಿಲ್ಲ, ಕೇವಲ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಸಿದ್ದಲಿಂಗಪ್ಪನವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಫಲಿಸುವುದಿಲ್ಲ. ತಾಲೂಕಿನ ಎಲ್ಲಾ ಸಂಘಗಳು ಸೇರಿದಂತೆ ತಂಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕರ ಬೆಂಬಲ, ಸಹಕಾರ ಸಿದ್ದಲಿಂಗಪ್ಪನವರಿಗಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಎಸ್.ಜಯಣ್ಣ ಮಾತನಾಡಿ, ತಂಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2023-24 ನೇ ಸಾಲಿನಲ್ಲಿ 2400 ಮಂದಿ ಷೇರುದಾರರಿದ್ದು, 77 ಲಕ್ಷದ 16 ಸಾವಿರ ರೂ ಷೇರುಧನವಿದೆ. ಸಂಘದಲ್ಲಿ ಒಂದು ಕೋಟಿ 32 ಲಕ್ಷದ 38 ಸಾವಿರ ರೂ ಠೇವಣಿಯಿದ್ದು, 5 ಕೋಟಿ 65 ಲಕ್ಷದ 97 ಸಾವಿರ ರೂಗಳನ್ನು ಸದಸ್ಯರಿಗೆ ಸಾಲ ನೀಡಿದ್ದು, 4 ಕೋಟಿ 62 ಲಕ್ಷದ 81 ಸಾವಿರ ರೂಗಳನ್ನು ಬ್ಯಾಂಕಿನಿಂದ ಸಾಲ ಪಡೆದಿದ್ದೇವೆ. ಈ ಸಾಲಿನಲ್ಲಿ ಸಂಘದ 5 ಲಕ್ಷದ 67 ಸಾವಿರ ರೂ ಲಾಭ ಪಡೆದಿದೆ. 2024-25 ರಲ್ಲಿ 2473 ಮಂದಿ ಷೇರುದಾರರಿದ್ದು, 78 ಲಕ್ಷದ 65 ಸಾವಿರ ರೂ ಷೇರುಧನವಿದೆ. ಸಂಘದಲ್ಲಿ ಒಂದು ಕೋಟಿ 26 ಲಕ್ಷದ 3 ಸಾವಿರ ರೂ ಠೇವಣಿಯಿದ್ದು, 5 ಕೋಟಿ 54 ಲಕ್ಷದ 7 ಸಾವಿರ ರೂಗಳನ್ನು ಸದಸ್ಯರಿಗೆ ಸಾಲ ನೀಡಿದ್ದು, 4 ಕೋಟಿ 58 ಲಕ್ಷದ 9 ಸಾವಿರ ರೂಗಳನ್ನು ಬ್ಯಾಂಕಿನಿಂದ ಸಾಲ ಪಡೆದಿದ್ದೇವೆ. ಈ ಸಾಲಿನಲ್ಲಿ ಸಂಘದ 3 ಲಕ್ಷದ 7 ಸಾವಿರ ರೂ ಲಾಭ ಪಡೆದಿದೆ. ಒಟ್ಟಾರೆ ಸಂಘದ ಆಡಳಿತ, ಲೆಕ್ಕಪತ್ರಗಳು ಪಾರದರ್ಶಕವಾಗಿದ್ದು, ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಸಂಘ ರೈತರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
ರೈತರಿಗೆ ಸಂಘ ಸಾಲ ನೀಡುತ್ತಿಲ್ಲ ಎಂಬ ಆರೋಪದ ಬಗ್ಗೆ ಉತ್ತರಿಸಿದ ಅವರು, 2023-24 ನೇ ಸಾಲಿನಲ್ಲಿ ಸಾಲಕ್ಕಾಗಿ ರೈತರು ಬೇಡಿಕೆ ಸಲ್ಲಿಸಿದ್ದು, ಅವರಿಂದ ಪಹಣಿ ಮುಂತಾದ ದಾಖಲೆ ಪಡೆದು ಜಿಲ್ಲಾ ಸಹಕಾರ ಬ್ಯಾಂಕಿಗೆ ಕಳಿಸಲಾಗಿತ್ತು. ಆದರೆ ನಬಾರ್ಡ್ ನಿಂದ 2023-24, 2024-25 ನೇ ಸಾಲಿನಲ್ಲಿಯೂ ಹಣ ದೊರೆಯದ ಕಾರಣ ರೈತರಿಗೆ ಸಾಲ ನೀಡಲಾಗಿಲ್ಲ. ಇದು ಕೇವಲ ತಂಡಗ ಸಹಕಾರ ಸಂಘದ ಸಮಸ್ಯೆ ಅಲ್ಲ. ತಾಲೂಕಿನ ಎಲ್ಲಾ ಸಂಘದಲ್ಲೂ ಇದೇ ಪರಿಸ್ಥಿತಿಯಿದೆ. ಈ ಬಾರಿ ಜಿಲ್ಲಾ ನಿರ್ದೇಶಕರಾದ ಸಿದ್ದಲಿಂಗಪ್ಪನವರು ಸಂಘಕ್ಕೆ 30 ಲಕ್ಷ ಸಾಲ ದೊರಕಿಸಿದ್ದು, ರೈತರಿಗೆ ಸಾಲ ನೀಡಲಾಗುವುದು ಎಂದರು.
ಸಂಘದ ಅಧ್ಯಕ್ಷ ಕೆ.ಎಂ. ಗಂಗಾಧರ್ ದೂರವಾಣಿ ಮೂಲಕ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪನವರ ಸಹಕಾರದಿಂದ ತಾಲೂಕಿನ ಎಲ್ಲಾ ಸಹಕಾರ ಸಂಘಗಳು ಪ್ರಗತಿಯತ್ತ ಮುನ್ನಡೆದಿದೆ. ತಂಡಗ ಸಹಕಾರ ಸಂಘ ಸಿದ್ದಲಿಂಗಪ್ಪನವರ ಪರವಾಗಿದೆ. ನಮ್ಮ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಸಂಘದ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಸ್.ಶಿವಾನಂದ್, ವಿ.ಆರ್. ದಾನಯ್ಯ, ಶಂಕರ್ ನಾಯಕ, ಟಿ.ಎನ್. ದಯಾನಂದ್, ರಾಮಲಿಂಗೇಗೌಡ, ಎಂ.ಸುಕನ್ಯ, ಕೆ.ಆರ್. ಪವಿತ್ರ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




