ತುರುವೇಕೆರೆ : ನನ್ನ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಆರೋಪ ಮಾಡಿರುವವರ ಮೇಲೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ ಗುಡುಗಿದರು.

ಪ್ರವಾಸಿ ಮಂದಿರ ಆವರಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಯೂನಿಯನ್ ಬ್ಯಾಂಕ್ ಚುನಾವಣೆಯೇ ಮೂಲ ಕಾರಣ. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕೆನ್ನುವ ದೃಷ್ಟಿಯಲ್ಲಿ ಡಿಸಿಸಿ ಬ್ಯಾಂಕಿಗೆ ನನ್ನನ್ನು ನಿರ್ದೇಶಕನ್ನಾಗಿ, ಟಿಎಪಿಸಿಎಂಎಸ್ ಗೆ ಒಕ್ಕಲಿಗ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದ ವಿಜಯ್ ಕುಮಾರ್ ಅವರನ್ನು ಅಭ್ಯರ್ಥಿಯಾಗಿ ಮಾಡಲು ನಿರ್ಧಾರ ಮಾಡಿದಾಗಲೇ ಭಿನ್ನಮತ ಪ್ರಾರಂಭವಾಯಿತು. ಈ ಚುನಾವಣೆಯ ವಿಷಯ ದ್ವೇಷವನ್ನಿಟ್ಟುಕೊಂಡು ಇಲ್ಲಸಲ್ಲದ ಆರೋಪಗಳನ್ನು ನನ್ನ ಮೇಲೆ ಮಾಡಲಾಗುತ್ತಿದೆ ಎಂದರು.
ಕೆಲವರು ಆರೋಪಿಸಿರುವ ಹಾಗೆ ತೊರೆಮಾವಿನಹಳ್ಳಿ ಸಹಕಾರ ಸಂಘದಲ್ಲಿ ಅವ್ಯವಹಾರವೂ ಆಗಿಲ್ಲ, ದುಸ್ಥಿತಿಗೂ ಬಂದಿಲ್ಲ. ಸಂಘ ಸುಭದ್ರವಾಗಿದೆ. ಸಂಘದಲ್ಲಿ ಸಾಕಷ್ಟು ಠೇವಣಿ ಇದೆ, ಸಾಲವನ್ನೂ ನೀಡಲಾಗಿದೆ. ಸಂಘದಲ್ಲಿ ಠೇವಣಿ ನೀಡಿದವರು ಏಕಕಾಲದಲ್ಲಿ ಬಂದು ಠೇವಣಿ ವಾಪಸ್ ಕೇಳುತ್ತಾರೆಂದು ಯಾರೂ ಚಿಂತಿಸಿರುವುದಿಲ್ಲ. ಠೇವಣಿಯನ್ನು ಹಾಗೇ ಇಟ್ಟರೆ ಬಡ್ಡಿ ನೀಡಲಾಗುವುದಕ್ಕೆ ಸಾಧ್ಯವಾಗುವುದಿಲ್ಲ. ಆ ಕಾರಣದಿಂದ ಸಂಘದ ಮಂಡಳಿ ಠೇವಣಿಯನ್ನು ವ್ಯಾಪಾರ ಸಾಲ ನೀಡುತ್ತಾರೆ. ಆರೋಪ ಮಾಡುತ್ತಿರುವವರೇ ವ್ಯಾಪಾರ ಸಾಲ ಕೊಡಿಸಿ ಈಗ ಠೇವಣಿದಾರರಿಗೆ ಇಲ್ಲಸಲ್ಲದ್ದನ್ನು ಹೇಳಿ ಠೇವಣಿ ಕೇಳುವಂತೆ ಹೇಳಿಕೊಡುತ್ತಿದ್ದಾರೆ. ಇದಲ್ಲದೆ ಕಳೆದ 6 ವರ್ಷದ ಹಿಂದೆ ಮಾಜಿ ನಿರ್ದೇಶಕರು ತಮ್ಮ ವ್ಯಾಪ್ತಿ ಮೀರಿ ಎಲ್ಲಾ ಸಂಘಗಳಲ್ಲಿ ಸಾಲ ಕೊಡಿಸಿ, ತದನಂತರ ಅದು ವಸೂಲಾಗಿಲ್ಲ. ಸಾಲ ಕೊಡಿಸಿದವರಿಗೆ ಸಾಲ ವಾಪಸ್ ಸಂಘಕ್ಕೆ ಕಟ್ಟಿ ಎಂದು ಹೇಳಬೇಕಾದ್ದು ಧರ್ಮ, ಅದನ್ನು ಬಿಟ್ಟು ಠೇವಣಿ ವಾಪಸ್ ಪಡೆದುಕೊಳ್ಳಿ ಹೋಗಿ ಎಂದು ಕಳಿಸುತ್ತಿರುವುದು ದುರದೃಷ್ಟಕರ ಎಂದರು.
ಕೊಡಗೀಹಳ್ಳಿ ಸಹಕಾರ ಸಂಘದಲ್ಲೂ ಈ ಹಿಂದೆ ಅವ್ಯವಹಾರ ನಡೆದಿದ್ದನ್ನು ನಾವು ಅಧಿಕಾರಕ್ಕೆ ಬಂದ ನಂತರ ಸರಿಪಡಿಸಿದ್ದೇವೆ. ನಮ್ಮ ಕಾಲದಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಸಂಘವನ್ನು ಅಭಿವೃದ್ದಿಯತ್ತ ಕೊಂಡೊಯ್ದಿದ್ದೇವೆ. ಹಿಂದೆ ಅಧಿಕಾರ ನಡೆಸಿದವರು ಸಂಘದ ಆವರಣದಲ್ಲಿ ಜಿಬಿಎಂ ನಡೆಸುತ್ತಿರಲಿಲ್ಲ, ಅವರೆಲ್ಲಾ ರೆಡ್ಡಿ ಹೋಟೆಲ್ ನಲ್ಲೇ ಜಿಬಿಎಂ ನಡೆಸುತ್ತಿದ್ದರು. ಆದರೆ ನಮ್ಮ ಅವಧಿಯಲ್ಲಿ ಸಂಘದಲ್ಲೇ ಸಭೆ ನಡೆಯುತ್ತಿದೆ, ಸಂಘವನ್ನು ದೇವಸ್ಥಾನದಂತೆ ಪರಿವರ್ತಿಸಿದ್ದೇವೆ ಎಂದ ಅವರು, ಹಿಂದಿನ ನಿರ್ದೇಶಕರ ಅವಧಿಯಲ್ಲಿ ಮಾದಿಹಳ್ಳಿ, ಕೋಳಘಟ್ಟ ಸೇರಿದಂತೆ ಸಾಕಷ್ಟು ಸಹಕಾರಿ ಸಂಘಗಳು ಯಾವ ಸ್ಥಿತಿಯನ್ನು ತಲುಪಿದ್ದವು, ಕಾರ್ಯದರ್ಶಿಗಳು ಯಾವ ಪರಿಸ್ಥಿತಿ ಎದುರಿಸುತ್ತಿದ್ದರೆಂಬುದು ಸಹಕಾರಿ ಬಂಧುಗಳಿಗೆ ತಿಳಿದಿದೆ ಎಂದರು.
ತಾಲ್ಲೂಕಿನ ಜನತೆ, ಸಹಕಾರಿ ಸಂಘಗಳು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಎಂದೂ ದ್ರೋಹ ಬಗೆಯುವುದಿಲ್ಲ. ಹಣ ಮಾಡಲು ಇಲ್ಲಿಗೆ ಬಂದಿಲ್ಲ, ಭಗವಂತ ನನಗೆ ಎಲ್ಲವನ್ನೂ ನೀಡಿದ್ದಾನೆ. ಜನರ, ರೈತರ ಸೇವೆಗೆ ಒಂದು ಅವಕಾಶ ದೊರೆತಿದೆ. ಅದನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ಇಂತಹ ಸಾವಿರ ಆರೋಪಗಳು ನನ್ನ ಮೇಲೆ ಬಂದರೂ ನಾನು ಎದೆಗುಂದುವುದಿಲ್ಲ. ಎಂದಿನಂತೆ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಹಾಗೂ ನಿಮ್ಮೆಲ್ಲರ ಸಹಕಾರದೊಂದಿಗೆ ತಾಲೂಕಿನ ಸಹಕಾರಿ ಸಂಘಗಳ ಹಾಗೂ ರೈತರ ಪ್ರಗತಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಹಕಾರ ಸಂಘಗಳ ಎಂ.ಡಿ.ರಮೇಶ್ ಗೌಡ, ಡಿ.ಪಿ.ರಾಜು, ವೀರೇಂದ್ರ ಪಾಟೀಲ್, ನಾಗರಾಜು, ದಯಾನಂದ್, ಕುಮಾರ್, ನಂಜುಂಡಪ್ಪ, ಗಿರೀಶ್ ಮಾಯಸಂದ್ರ, ಪ್ರಸನ್ನಕುಮಾರ್, ಬೋರೇಗೌಡ, ರಾಜು, ಮಂಜಣ್ಣ, ಪಪಂ ಮಾಜಿ ಸದಸ್ಯ ಯಜಮಾನ್ ಮಹೇಶ್, ಜಿಲ್ಲಾ ಯೂನಿಯನ್ ಉಪಾಧ್ಯಕ್ಷ ವಿಜಯಕುಮಾರ್ ಸೇರಿದಂತೆ ತಾಲೂಕಿನ ವಿವಿಧ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಗೋಷ್ಟಿಯಲ್ಲಿ ಉಪಸ್ಥಿತರಿದ್ದು, ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪ ಅವರಿಗೆ ಬೆಂಬಲ ಸೂಚಿಸಿದರು.
ವರದಿ : ಗಿರೀಶ್ ಕೆ ಭಟ್




