ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಇದುವರೆಗೆ ಮನರೇಗಾ ವಿಶೇಷ ಚರ್ಚೆಗೆ ಅವಕಾಶ ಸಿಗದ ಕಾರಣ ಅಧಿವೇಶನವನ್ನು ಫೆಬ್ರವರಿ 2ರಿಂದ ಎರಡು ದಿನಗಳ ಕಾಲ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದು, ನರೇಗಾ ವಿಶೇಷ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಮಾತನಾಡಿ, ನರೇಗಾ ಯೋಜನೆಯ ಬಗ್ಗೆ ಚರ್ಚಿಸಲು ನರೇಗಾ ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ತಂದಿರುವ ಕೇಂದ್ರದ ವಿರುದ್ಧ ನಿರ್ಣಯ ಅಂಗೀಕರಿಸಲು ಸದನದಲ್ಲಿ ಸಮಯವೇ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅಧಿವೇಶನವನ್ನು ಎರಡು ದಿನ ವಿಸ್ತರಿಸಲಾಗುವುದು.
ಫೆಬ್ರವರಿ 2 ಮತ್ತು 3 ರಂದು ವಿಶೇಷವಾಗಿ ಮನರೇಗಾ ಚರ್ಚೆ ನಡೆಸಲಾಗುವುದು/ ಈ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯರು, ವಿಧಾನಸಭೆ ಸದಸ್ಯರು ಉಭಯ ಸದನಗಳಲ್ಲಿ ಕಡ್ಡಾಯವಾಗಿ ನರೇಗಾ ಚರ್ಚೆಯಲ್ಲಿ ಭಾಗವಹಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.




