ತುರುವೇಕೆರೆ : ಮೈಸೂರು ಮಹಾರಾಜರಿಂದ ಶಂಕುಸ್ಥಾಪನೆಗೊಂಡ ಇತಿಹಾಸವಿರುವ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಯಾಗಿ 50 ವರ್ಷ ಪೂರೈಸಿದ ಸವಿನೆನಪಿಗಾಗಿ ಫೆಬ್ರವರಿ 02 ರಂದು ಸಂಜೆ 05 ಗಂಟೆಗೆ ಕಾಲೇಜು ಕ್ರೀಡಾಂಗಣದಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ವಿ.ಎನ್. ನಂಜೇಗೌಡ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಲೇಜಿಗೆ 50 ವರ್ಷಗಳ ಭವ್ಯ ಇತಿಹಾಸವಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದು ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ. ಕಾಲೇಜಿನ 50 ವರ್ಷಗಳ ಸುದೀರ್ಘ ಇತಿಹಾಸವನ್ನು ಮೆಲುಕು ಹಾಕುವ ಉದ್ದೇಶದಿಂದ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಶಾಸಕರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾರಂಭದ ದಿವ್ಯ ಸಾನಿದ್ಯವನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿಶ್ಚಲಾನಂದನಾಥ ಮಹಾಸ್ವಾಮೀಜಿ ವಹಿಸಲಿದ್ದು, ಶಾಸಕ ಎಂ.ಟಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ.ಬಾಲಗುರುಮೂರ್ತಿ ಉದ್ಘಾಟಿಸಲಿದ್ದು, ಬಿಗ್ ಬಾಸ್ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ನೇಹಮಿಲನ ಟ್ರಸ್ಟ್ ಅಧ್ಯಕ್ಷ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ತಹಸೀಲ್ದಾರ್ ಕುಂಇ ಅಹಮದ್, ಇಒ ಅನಂತರಾಜು, ಬಿಇಒ ಸೋಮಶೇಖರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರುಗಳು ಆಗಮಿಸಲಿದ್ದಾರೆಂದರು.
ಸಮಾರಂಭದಲ್ಲಿ ವೈದ್ಯರಾದ ಡಾ.ವಿಜಯಕುಮಾರ್, ಡಾ.ನಂಜಪ್ಪ, ಡಾ.ಚೈತ್ರ, ವಾಸ್ತುಶಿಲ್ಪ ವಿನ್ಯಾಸಗಾರ ಕೆ.ಆರ್.ಶ್ರೀಕಂಠಪ್ರಸಾದ್, ಸಾಹಿತಿ ತುರುವೇಕೆರೆ ಪ್ರಸಾದ್, ಸಹಾಯಕ ಅಭಿಯಂತರ ಹೊನ್ನೇಶ್ ಗೌಡ, ಸಹಾಯಕ ಪ್ರಾಧ್ಯಾಪಕಿ ವಿನುತಶ್ರೀ, ಉಪನ್ಯಾಸಕಿ ಶಹನಾಜ್ ಬಾನು ಅವರನ್ನು ಸನ್ಮಾನಿಸಲಾಗುವುದು ಎಂದ ಅವರು, ಕಾರ್ಯಕ್ರಮಕ್ಕೆ ತಾಲೂಕಿನ ನಾಗರೀಕರು, ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ಪೋಷಕರು ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ವರದಿ: ಗಿರೀಶ್ ಕೆ ಭಟ್




