ವಿಜಯನಗರ : ಚಿನ್ನದ ದರ ಇಳಿಯಲಿ ಎಂಬ ಜನಸಾಮಾನ್ಯರ ಆಕಾಂಕ್ಷೆ ಇದೀಗ ದೇವಿಯ ಮೊರೆ ಹೋಗಿರುವ ಅಪರೂಪದ ಘಟನೆಯೊಂದು ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ನಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಪ್ರಸಿದ್ಧ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವದ ವೇಳೆ ಭಕ್ತನೊಬ್ಬರು ತಮ್ಮ ವಿಭಿನ್ನ ಹರಕೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಗ್ರಾಮದ ನಿವಾಸಿ ಕೆ. ನಾಗರಾಜ ಉಲವತ್ತಿ ಎಂಬ ಭಕ್ತ, ‘ಚಿನ್ನದ ದರ ಇಳಿಯಲಿ, ಮುನಿದ ಚಿನ್ನ ಒಲಿಯಲಿ’ ಎಂಬ ವಾಕ್ಯವನ್ನು ಬಾಳೆಹಣ್ಣಿನ ಮೇಲೆ ಬರೆದು, ಅದನ್ನು ದೇವಿಯ ರಥೋತ್ಸವದ ಸಂದರ್ಭದಲ್ಲಿ ಭಕ್ತಿಪೂರ್ವಕವಾಗಿ ಅರ್ಪಿಸಿದ್ದಾರೆ.
ಪ್ರತಿವರ್ಷ ಸಾವಿರಾರು ಭಕ್ತರನ್ನು ಸೆಳೆಯುವ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರೆ ಈ ಬಾರಿ ವಿಶೇಷ ಘಟನೆಯಿಂದ ಇನ್ನಷ್ಟು ಜನಪ್ರಿಯವಾಗಿದೆ. ರಥೋತ್ಸವದ ಸಮಯದಲ್ಲಿ ನಾಗರಾಜ ಉಲವತ್ತಿ ಅವರು ದೇವಿಯ ರಥಕ್ಕೆ ಬಾಳೆಹಣ್ಣನ್ನು ಎಸೆದು ಪ್ರಾರ್ಥನೆ ಸಲ್ಲಿಸಿದ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಗಿ, ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.




