ಹಣ ಪಾವತಿಗೆ ಆಗ್ರಹಿಸಿ ೨೪ ಫಲಾನುಭವಿಗಳಿಂದ ಜಿಲ್ಲಾಡಳಿತಕ್ಕೆ ಮನವಿ
ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಶೌಚಾಲಯ ನಿರ್ಮಿಸಿ ಆರು ತಿಂಗಳು ಕಳೆದರೂ ಸರ್ಕಾರದಿಂದ ಬರಬೇಕಾದ ಹಣ ಪಾವತಿಯಾಗದೆ, ಬಡಾವಣೆಯ ೨೪ ಮಂದಿ ಬಡ ಫಲಾನುಭವಿಗಳು ತೀವ್ರ ಸಂಕಷ್ಟ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಕೂಡಲೇ ಹಣ ಪಾವತಿಸುವಂತೆ ಆಗ್ರಹಿಸಿ ಅರಸೀಕೆರೆ ನಗರದ ಇಂದ್ರಾನಗರದ ನಿವಾಸಿಗಳು ಶುಕ್ರವಾರದಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೆ ವೇಳೆ ನಗರಸಭೆ ಸದಸ್ಯ ಇಮ್ರಾನ್ ಖಾನ್ ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರದ ಸೂಚನೆ ಮತ್ತು ಅಧಿಕಾರಿಗಳ ಪ್ರೇರಣೆಯಂತೆ ಫಲಾನುಭವಿಗಳು ತಮ್ಮ ಸ್ವಂತ ಹಣ ಹಾಗೂ ಸಾಲ ಪಡೆದು ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ ಶೌಚಾಲಯ ನಿರ್ಮಾಣ ಪೂರ್ಣಗೊಂಡು ತಿಂಗಳುಗಳು ಕಳೆದರೂ, ಫಲಾನುಭವಿಗಳಿಗೆ ಮಂಜೂರಾಗಬೇಕಾದ ಅನುದಾನ ಇದುವರೆಗೂ ದೊರೆತಿಲ್ಲ ಎಂಬುದು ಆತಂಕಕಾರಿ ವಿಷಯವಾಗಿದೆ. ಈ ಕುರಿತು ಅರಸೀಕೆರೆ ನಗರಪಾಲಿಕೆ ಅಧಿಕಾರಿಗಳನ್ನು ಹಲವು ಬಾರಿ ಸಂಪರ್ಕಿಸಿದರೂ, “ಈ ವಿಷಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೇಳಿ” ಎಂಬ ಉಡಾಫೆ ಉತ್ತರ ನೀಡಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವ ಆರೋಪಗಳು ಕೇಳಿಬಂದಿವೆ. ಸಮಸ್ಯೆಗೆ ಸ್ಪಷ್ಟ ಉತ್ತರ ನೀಡದೇ ಅಧಿಕಾರಿಗಳು ಫಲಾನುಭವಿಗಳನ್ನು ಕಚೇರಿಯಿಂದ ಕಚೇರಿಗೆ ಅಲೆಸುತ್ತಿರುವುದು ಆಡಳಿತ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು. ಇನ್ನು, ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬರಬೇಕಾದ ಸಂಪೂರ್ಣ ಅನುದಾನವನ್ನು ಕಡಿತಗೊಳಿಸಿ, ಅತಿ ಕಡಿಮೆ ಪ್ರಮಾಣದ ಹಣವನ್ನು ಮಾತ್ರ ಫಲಾನುಭವಿಗಳಿಗೆ ನೀಡಲು ಕೆಲ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನುವ ಆರೋಪಗಳು ಸ್ಥಳೀಯರಲ್ಲಿ ಅನುಮಾನ ಹಾಗೂ ಆಕ್ರೋಶ ಹುಟ್ಟಿಸಿವೆ. ಇದು ಯೋಜನೆಯ ಉದ್ದೇಶವನ್ನೇ ಪ್ರಶ್ನಿಸುವಂತೆ ಮಾಡಿದೆ ಎಂದು ಹೇಳಿದರು.

ಬಡ ಹಾಗೂ ಮಧ್ಯಮ ವರ್ಗದ ಫಲಾನುಭವಿಗಳು ಶೌಚಾಲಯ ನಿರ್ಮಾಣಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿದ್ದು, ಕೆಲವರು ಸಾಲ ಪಡೆದು ನಿರ್ಮಿಸಿದ್ದಾರೆ. ಹಣ ಪಾವತಿ ಆಗದ ಕಾರಣ ಸಾಲದ ಬಡ್ಡಿ, ಮನೆ ಖರ್ಚು ಮತ್ತು ಜೀವನ ನಿರ್ವಹಣೆ ಕಷ್ಟಕರವಾಗಿದೆ. “ಸರ್ಕಾರದ ಮಾತು ನಂಬಿ ಶೌಚಾಲಯ ಕಟ್ಟಿದ್ದೇವೆ. ಆದರೆ ಹಣ ಕೊಡದೆ ನಮ್ಮನ್ನು ಮೋಸ ಮಾಡುತ್ತಿದ್ದಾರೆ” ಎಂದು ಫಲಾನುಭವಿಗಳು ಬೇಸರ ವ್ಯಕ್ತಪಡಿಸಿದರು. ಸ್ವಚ್ಛತೆ ಮತ್ತು ಆರೋಗ್ಯದ ಹೆಸರಿನಲ್ಲಿ ಜನರನ್ನು ಪ್ರೋತ್ಸಾಹಿಸುವ ಸರ್ಕಾರ, ಹಣ ಪಾವತಿಯಲ್ಲಿ ವಿಳಂಬ ಮಾಡುವುದರಿಂದ ಯೋಜನೆಗಳ ಮೇಲಿನ ಜನರ ನಂಬಿಕೆ ಕುಸಿಯುತ್ತಿದೆ. ಇಂತಹ ನಿರ್ಲಕ್ಷ್ಯ ಮುಂದುವರೆದರೆ ಭವಿಷ್ಯದಲ್ಲಿ ಯಾವುದೇ ಸರ್ಕಾರಿ ಯೋಜನೆಗಳಿಗೆ ಜನರು ಮುಂದೆ ಬರದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ನಗರಪಾಲಿಕೆ ಆಯುಕ್ತರು ಹಾಗೂ ಸಂಬಂಧಿಸಿದ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಶೌಚಾಲಯ ನಿರ್ಮಿಸಿದ ಎಲ್ಲಾ ೨೪ ಫಲಾನುಭವಿಗಳಿಗೆ ಮಂಜೂರಾದ ಸಂಪೂರ್ಣ ಅನುದಾನವನ್ನು ವಿಳಂಬವಿಲ್ಲದೆ ಪಾವತಿಸಬೇಕು ಎಂಬುದು ಒತ್ತಾಯವಾಗಿದೆ ಎಂದರು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಾಗೂ ಹೋರಾಟ ನಡೆಸುವುದಾಗಿ ಫಲಾನುಭವಿಗಳು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಮಿಟಿ ಅಧ್ಯಕ್ಷ ಕಮಿಲ್ ಉಲ್ಲಾ, ಪಾಷಾ, ರೂಪ, ಷಹಾ ಭಾನುಮ ಹೆಚ್. ಹಸೀನಾ, ಶಾಹಿನಾ ಬೇಗಂ, ಕಲೀಂ, ಜಬೀನಾ, ನಸೀಬ್ ಪಾತೀಮ ಸೇರಿದಂತೆ ನಿವಾಸಿಗಳು ಉಪಸ್ಥಿತರಿದ್ದರು.
ವರದಿ: ರಾಜು ಅರಸಿಕೆರೆ




