ಬೆಂಗಳೂರು : ಹಣಕಾಸು ಸಚಿವರೂ ಆಗಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ 2026ರ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ.
ಫೆಬ್ರವರಿ 2 ರಿಂದ ಅವರು ವಿವಿಧ ಇಲಾಖೆಗಳ ಸಭೆಗಳನ್ನು ನಡೆಸಲಿದ್ದಾರೆ. ಮಾರ್ಚ್‌ನಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಬಜೆಟ್ ಮಂಡನೆ ದಿನಾಂಕ ಇನ್ನೂ ಸಹ ನಿಗದಿಯಾಗಿಲ್ಲ.
ಬೆಂಗಳೂರಿನ ಶಕ್ತಿ ಭವನದಲ್ಲಿ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಇಲಾಖಾವಾರು ನಡೆಯಲಿದೆ. ಫೆಬ್ರವರಿ 2ರ ಸೋಮವಾರದಿಂದ ಫೆಬ್ರವರಿ 6ರ ಶುಕ್ರವಾರದ ತನಕ ಸರಣಿ ಸಭೆಗಳು ನಡೆಯಲಿದ್ದು, ಯಾವ ಇಲಾಖೆ ಸಭೆ ಯಾವಾಗ? ಎಂದು ಈಗಾಗಲೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈಗಾಗಲೇ ಸಿದ್ದರಾಮಯ್ಯ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿ ಬಜೆಟ್ ಪೂರ್ವ ತಯಾರಿ ಕುರಿತು ಚರ್ಚಿಸಿದ್ದಾರೆ.
ಈಗ ಇಲಾಖಾವಾರು ಬೇಡಿಕೆ ಕುರಿತು ಸಭೆಗಳನ್ನು ನಿಗದಿ ಮಾಡಲಾಗಿದೆ. ಆದ್ದರಿಂದ ಸೋಮವಾರದಿಂದ ಸಿದ್ದರಾಮಯ್ಯ ಬೆಂಗಳೂರು ನಗರದಲ್ಲಿಯೇ ಇರಲಿದ್ದಾರೆ.
ಸಿದ್ದರಾಮಯ್ಯ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ಈಗಾಗಲೇ ಬರೆದಿದ್ದಾರೆ. ದೇವರಾಜ ಅರಸು ಅವರ ದಾಖಲೆಯನ್ನೂ ಮುರಿದಿದ್ದಾರೆ. ಈಗ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಬರೆಯಲಿದ್ದಾರೆ.
2026-27ನೇ ಸಾಲಿನ ಬಜೆಟ್ ಸಿದ್ದರಾಮಯ್ಯ ಮಂಡನೆ ಮಾಡುತ್ತಿರುವ 17ನೇ ಬಜೆಟ್ ಆಗಿದೆ. ರಾಜ್ಯದ ಯಾವ ರಾಜಕೀಯ ನಾಯಕರು ಸಹ ಇಷ್ಟು ಬಾರಿ ಬಜೆಟ್ ಮಂಡನೆ ಮಾಡಿಲ್ಲ. ಆದ್ದರಿಂದ ಈಗ ಸಿದ್ದರಾಮಯ್ಯ ಹೊಸ ದಾಖಲೆ ಬರೆಯಲಿದ್ದಾರೆ.




