Ad imageAd image

ಕರ್ನಾಟಕದ ಅತಿ ಚಿಕ್ಕ ರೈಲು ಮಾರ್ಗ ಮತ್ತೆ ಓಪನ್ : ಎಲ್ಲಿಂದ ಎಲ್ಲಿಗೆ ಪ್ರಯಾಣ ಗೊತ್ತಾ..?

Bharath Vaibhav
ಕರ್ನಾಟಕದ ಅತಿ ಚಿಕ್ಕ ರೈಲು ಮಾರ್ಗ ಮತ್ತೆ ಓಪನ್ : ಎಲ್ಲಿಂದ ಎಲ್ಲಿಗೆ ಪ್ರಯಾಣ ಗೊತ್ತಾ..?
RAILWAY
WhatsApp Group Join Now
Telegram Group Join Now

ಕರ್ನಾಟಕದ ಅತಿ ಚಿಕ್ಕ ರೈಲು ಮಾರ್ಗದಲ್ಲಿ ಮತ್ತೆ ರೈಲು ಸಂಚಾರ ಆರಂಭವಾಗಲಿದೆ. ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಫೆಬ್ರವರಿ 7ರಂದು ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.

ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ರೈಲು ಮಾರ್ಗ ಇದಾಗಿದೆ.ಅಳ್ನಾವರ-ದಾಂಡೇಲಿ ನಡುವಿನ ರೈಲು ಸಂಚಾರ ಪುನಃ ಆರಂಭವಾಗುತ್ತಿದೆ. ವಿದ್ಯಾರ್ಥಿಗಳು, ಪ್ರತಿದಿನ ಸಂಚಾರ ನಡೆಸುವ ಉದ್ಯೋಗಿಗಳಿಗೆ ಈ ರೈಲು ಸೇವೆಯಿಂದ ಅನುಕೂಲವಾಗಲಿದೆ.

ಹಲವು ವರ್ಷಗಳ ಬಳಿಕ ಧಾರವಾಡ ಜಿಲ್ಲೆಯ ಅಳ್ನಾವರ ಮತ್ತು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಡುವೆ ರೈಲು ಸಂಚಾರ ಪ್ರಾರಂಭವಾಗುತ್ತಿದೆ. ಈ ಕುರಿತು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಅವರ ಕಚೇರಿ ಮಾಹಿತಿ ನೀಡಿದೆ.

ಕೆಲವು ದಿನಗಳ ಹಿಂದೆ ರೈಲ್ವೆ ಮಂಡಳಿ ಅಳ್ನಾವರ-ದಾಂಡೇಲಿ ನಡುವಿನ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿತ್ತು. ಸಚಿವ ವಿ.ಸೋಮಣ್ಣ ಫೆಬ್ರವರಿ 7ರಂದು ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದು, ಪ್ರತಿದಿನ ರೈಲು ಸಂಚಾರವನ್ನು ನಡೆಸಲಿದೆ.

ಅತಿ ಚಿಕ್ಕ ರೈಲು ಮಾರ್ಗ: ಅಳ್ನಾವರ-ದಾಂಡೇಲಿ ಕರ್ನಾಟಕದ ಅತಿ ಚಿಕ್ಕ ರೈಲು ಮಾರ್ಗವಾಗಿದೆ. ಈ ಮಾರ್ಗ 26 ಕಿ.ಮೀ. ಇದ್ದು 3 ನಿಲ್ದಾಣಗಳನ್ನು ಹೊಂದಿದೆ.

ಕೋವಿಡ್ ಪರಿಸ್ಥಿತಿಗೂ ಮೊದಲು ಇಲ್ಲಿ ರೈಲು ಸಂಚಾರ ನಡೆಸುತ್ತಿತ್ತು. ಬಳಿಕ ರೈಲು ಸಂಚಾರ ಸ್ಥಗಿತಗೊಂಡಿತ್ತು. ಈಗ ಪ್ರಯಾಣಿಕರ ಬೇಡಿಕೆಯಂತೆ ರೈಲು ಸಂಚಾರ ಪುನಃ ಆರಂಭವಾಗುತ್ತಿದೆ.

ಅಳ್ನಾವರ-ದಾಂಡೇಲಿ ನಡುವೆ ಡೆಮು ರೈಲನ್ನು ಓಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಡೆಮು ರೈಲು ಬೆಳಗ್ಗೆ ಮತ್ತು ಸಂಜೆ ಎರಡು ನಿಲ್ದಾಣದ ನಡುವೆ ಸಾಗಲಿದೆ. 45 ನಿಮಿಷದಲ್ಲಿ ಎರಡೂ ನಿಲ್ದಾಣವನ್ನು ರೈಲು ಸಂಪರ್ಕಿಸುತ್ತದೆ.

ದಾಂಡೇಲಿ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಪ್ರವಾಸಕ್ಕೆ ಬರುವವರಿಗೆ ರೈಲು ಸೇವೆ ಉಪಯೋಗವಾಗಲಿದೆ. ವಾರದ 6 ದಿನಗಳ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ನಡೆಸಲಿದೆ, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷೆ ಮಾಡಲಾಗಿದೆ.

2025ರ ಡಿಸೆಂಬರ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, “ದಾಂಡೇಲಿ ಮತ್ತು ಅಳ್ನಾವರ ನಡುವೆ ಸ್ಥಗಿತಗೊಂಡಿದ್ದ ಬಹುದಿನಗಳ ರೈಲು ಸಂಚಾರವನ್ನು ನೈರುತ್ಯ ರೈಲ್ವೆಯು ಡಿಇಎಂಯು (DEMU) ರೈಲು ಸೇವೆಯೊಂದಿಗೆ ಪುನರಾರಂಭಿಸಲು ಅನುಮೋದನೆ ನೀಡಿದೆ” ಎಂದು ಹೇಳಿದ್ದರು.

“ನನ್ನ ನಿರಂತರ ಪ್ರಯತ್ನ, ಪರಿಶ್ರಮ ಮತ್ತು ಪ್ರಸ್ತಾವನೆಗಳ ಫಲವಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿರುವುದಕ್ಕೆ ನಾನು ಸಂತಸ ವ್ಯಕ್ತಪಡಿಸುತ್ತೇನೆ. ಕೇಂದ್ರ ಸರ್ಕಾರದ ಮತ್ತು ರೈಲ್ವೆ ಸಚಿವಾಲಯದ ಈ ನಿರ್ಧಾರಕ್ಕೆ, ವಿಶೇಷವಾಗಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ನಾನು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ತಿಳಿಸಿದ್ದರು.

“​ಈ ಹೊಸ ಡಿಇಎಂಯು ರೈಲು ಸೇವೆಯು ದಾಂಡೇಲಿ ಮತ್ತು ಸುತ್ತಮುತ್ತಲಿನ ಸಾವಿರಾರು ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವ್ಯಾಪಾರ ವಹಿವಾಟುಗಳಿಗೆ ಹೆಚ್ಚಿನ ಅನುಕೂಲ ಒದಗಿಸಿ, ಪ್ರದೇಶದ ಸಂಪರ್ಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ” ಎಂದು ಹೇಳಿದ್ದರು.

ರೈಲು ವೇಳಾಪಟ್ಟಿ

ಅಳ್ನಾವರದಿಂದ ರೈಲು ಬೆಳಗ್ಗೆ 5.30, 7.40 ಮತ್ತು ಸಂಜೆ 7.30ಕ್ಕೆ ಹೊರಡಲಿದೆ. 45 ನಿಮಿಷದಲ್ಲಿ ದಾಂಡೇಲಿ ತಲುಪಲಿದೆ.

ದಾಂಡೇಲಿಯಿಂದ ರೈಲು ಬೆಳಗ್ಗೆ 6.45, 8.40 ಮತ್ತು ರಾತ್ರಿ 8.30ಕ್ಕೆ ಹೊರಡಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!