ಬೆಂಗಳೂರು : ಕಳೆದ ವಾರ ನಡೆದ ಜಂಟಿ ಅಧಿವೇಶನದಲ್ಲಿ ವಿಪಕ್ಷಗಳಿಗೆ ಆಹಾರವಾಗಿದ್ದ ಅಬಕಾರಿ ಇಲಾಖೆಯ ಭ್ರಷ್ಟಾಚಾರ ಆರೋಪ, ಸಚಿವರ ರಾಜೀನಾಮೆಗೆ ಆಗ್ರಹ ಕೇಳಿಬಂದ ಬೆನ್ನಲ್ಲೇ ಇದೀಗ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಹಿಂದೆಂದೂ ಆಗಿರದ ರೀತಿ ಕೇವಲ 47 ಗಂಟೆಗಳಲ್ಲಿ ಬರೊಬ್ಬರಿ 14,275 ಲೈಸೆನ್ಸ್‌ಗಳನ್ನು ನವೀಕರಣ ಮಾಡುವ ಮೂಲಕ ಅಬಕಾರಿ ಇಲಾಖೆ ಹೊಸ ದಾಖಲೆ ನಿರ್ಮಿಸಿದೆ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದ್ದಾರೆ.
ಅಬಕಾರಿ ಪರವಾನಗಿ ಪಡೆಯುವ ವೇಳೆ ಕಿರುಕುಳ ತಪ್ಪಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಸಿಎಲ್-7 ಲೈಸೆನ್ಸ್ ಪಡೆಯಲು ಅರ್ಜಿದಾರರು 16 ಟೇಬಲ್‌ಗಳಿಗೆ ಅಲೆಯಬೇಕಿತ್ತು.
ಈಗ ಅದನ್ನು ಕೇವಲ 7 ಟೇಬಲ್‌ಗಳಿಗೆ ಸೀಮಿತಗೊಳಿಸಿದ್ದೇವೆ ಮತ್ತು ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯಲಿದ್ದು ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದಿದ್ದಾರೆ.
ಈ ಹಿಂದಿನಂತೆ ಬಾರ್ ಲೈಸೆನ್ಸ್‌ಗಳನ್ನು ರಿನಿವಲ್ ಮಾಡಿಕೊಳ್ಳಲೂ ಕೂಡ ಈಗ ಹೆಚ್ಚು ತ್ರಾಸ ಪಡಬೇಕಿಲ್ಲ. ಕೇವಲ 47 ಗಂಟೆಗಳಲ್ಲಿ 14,275 ಲೈಸೆನ್ಸ್‌ಗಳನ್ನು ನವೀಕರಿಸುವ ಮೂಲಕ ಅಬಕಾರಿ ಇಲಾಖೆ ಹೊಸ ದಾಖಲೆ ಬರೆದಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಭ್ರಷ್ಟಾಚಾರದಲ್ಲಿ ತೊಡಗಿದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.




