ಜನಸೇವೆ ಮಾಡ್ತಿದ್ದೇನೆ, ಗುಂಪುಗಾರಿಕೆ ಅಲ್ಲ: ರಕ್ತದ ಕಣಕಣದಲ್ಲಿ ಜೆಡಿಎಸ್ ತುಂಬಿದೆ ಎಂದ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ
ತುರುವೇಕೆರೆ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುವ ಆಶಯ ಹೊಂದಿದ್ದೇನೆ. ಜೆಡಿಎಸ್ ಪಕ್ಷದ ಟಿಕೆಟ್ ಪಡೆಯಲು ನಾನೂ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಘೋಷಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ, ಕೇಂದ್ರ ರೈಲ್ವೆ ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಮನೆಮಗನಾಗಿ ಇಲ್ಲಿನ ಜನರ ಸೇವೆಯನ್ನು ಮಾಡುತ್ತಿದ್ದೇನೆ. ನನ್ನ ರಕ್ತದ ಕಣಕಣದಲ್ಲೂ ದೇವೇಗೌಡರು, ಕುಮಾರಣ್ಣ, ಜೆಡಿಎಸ್ ಪಕ್ಷವಿದೆ. ಅದನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಕಳೆದ ಒಂದೂವರೆ ದಶಕದಿಂದ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಜನರ ಆಶಯದಂತೆ ಸ್ಪರ್ಧಿಸುವ ಮನಸ್ಸು ಮಾಡಿದ್ದೇನೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ಪಡೆಯಲು ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದರು.
ನಮ್ಮ ನಾಯಕರಾದ, ಶಾಸಕ ಎಂ.ಟಿ.ಕೃಷ್ಣಪ್ಪನವರು ಹಿರಿಯರಿದ್ದಾರೆ, ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರು ಎಲ್ಲೆಂದರಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಿ ನಾನು ಜೆಡಿಎಸ್ ಪಕ್ಷದಲ್ಲಿ ಗೊಂದಲ ಉಂಟು ಮಾಡುತ್ತಿದ್ದೇನೆ, ಪಕ್ಷದಲ್ಲಿ ಒಡಕು ಮೂಡಿಸುತ್ತಿದ್ದೇನೆ, ಗುಂಪುಗಾರಿಕೆ ಮಾಡುತ್ತಿದ್ದೇನೆಂದು ಹೇಳುತ್ತಿರುವುದು ಮನಸ್ಸಿಗೆ ಬಹಳ ಬೇಸರವುಂಟು ಮಾಡಿದೆ. ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನು ಬೇರೆ ಯಾವುದೋ ಪಕ್ಷದ ಪರವಾಗಿ ಕೆಲಸ ಮಾಡುತ್ತಿಲ್ಲ ಅಥವಾ ಬೇರೆ ಪಕ್ಷಕ್ಕೆ ಮತ ನೀಡಿ ಎಂದು ಕೇಳುತ್ತಿಲ್ಲ. ನನ್ನ ಉಸಿರಲ್ಲಿ ಬೆರೆತಿರುವ ಜೆಡಿಎಸ್ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ನನ್ನ ದುಡಿಮೆಯ ಹಣದಲ್ಲಿ ನನ್ನ ತಾಲೂಕಿನ ಜನರ ಸೇವೆ ಮಾಡುತ್ತಿದ್ದೇನೆ. ಇದು ಅವರಿಗೆ ಗೊಂದಲ, ಗುಂಪುಗಾರಿಕೆ ಎಂಬಂತೆ ಕಾಣುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಜೆಡಿಎಸ್ ಕಾರ್ಯಕರ್ತರು, ತಾಲೂಕಿನ ಜನತೆ ಜನಸೇವೆ ಮಾಡಬೇಡಿ ಎಂದರೆ ಇಂದೇ ನಿಲ್ಲಿಸಲು ಸಿದ್ದನಿದ್ದೇನೆ ಎಂದರು.
ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ನನ್ನ ಕುಟುಂಬ ಬಿಟ್ಟುಬಂದು ಕುಮಾರಣ್ಣ ಸಿಎಂ ಆಗ್ತಾರೆ ಎಂಬ ಆಶಾಭಾವನೆಯಿಂದ ಎಂ.ಟಿ. ಕೃಷ್ಣಪ್ಪನವರ ಪರವಾಗಿ ತಿರುಗಿ ನನ್ನ ಕೈಲಾದಷ್ಟು ಹಣವನ್ನು ಮನಃಪೂರ್ವಕವಾಗಿ ಖರ್ಚು ಮಾಡಿದ್ದೇನೆ. ಶಾಸಕ ಎಂ.ಟಿ.ಕೃಷ್ಣಪ್ಪನವರ ಪರವಾಗಿ ಹಗಲಿರುಳೆನ್ನದೆ ಕೆಲಸ ಮಾಡಿದ್ದೇನೆ. ಆದರೆ ಇದುವರೆಗೂ ಅವರಲ್ಲಿ ಚುನಾವಣಾ ವೆಚ್ಚಕ್ಕಾಗಲೀ, ಯಾವುದೇ ಶಿಫಾರಸ್ಸಿಗೆ ಲೆಡರ್ ಹೆಡ್ ಆಗಲೀ, ಯಾರಿಗೋ ಸಹಾಯ ಮಾಡಿ ಎಂದಾಗಲೀ ಕೇಳಿಲ್ಲ ಎಂದ ಅವರು, ಕೆಲವು ದಿನಗಳ ಹಿಂದೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಮಾತುಕತೆಗೆ ಕರೆದಿದ್ದರು, ಅವರ ಮೇಲೆ ಗೌರವದಿಂದ ಮಾತುಕತೆಗೆ ಹೋಗಿದ್ದೆ. ಆ ಮಾತುಕತೆಯಲ್ಲಿ ಯಾರ್ರೀ ಹೊಸಹಳ್ಳಿ ದೇವಣ್ಣ ನೀವೇ ಅಲ್ವೇನ್ರೀ ಮಾತುಕತೆಗೆ ಕರೆದುಕೊಂಡು ಬಂದಿರೋದು ಅಂದರು. ಮಾತುಕತೆ ಆಯ್ತು, ಸಾಕಷ್ಟು ಮಾತುಗಳು ಆಡಿದರು, ಅವರು ಹಿರಿಯರು ಮಾತಾಡಲಿ ಬೇಸರವಿಲ್ಲ. ಆದರೆ ಕಾಂಗ್ರೆಸ್ ಹೋಗ್ರೀ ನೀವು, ಛಲ ಇದ್ದರೆ ಕಾಂಗ್ರೆಸ್ ಹೋಗಿ ನಿಂತು ನನ್ನ ಮೇಲೆ ಗೆಲ್ರೀ ಅಂತ ಹೇಳಿದ ಮಾತು ಬಹಳ ನೋವುಂಟು ಮಾಡಿತು. ಆ ಕ್ಷಣದಲ್ಲೇ ಕೃಷ್ಣಪ್ಪನವರಿಗೆ ಹೇಳಿದೆ, ನನ್ನ ರಕ್ತದ ಕಣಕಣದಲ್ಲೂ ದೇವೇಗೌಡರು, ಕುಮಾರಣ್ಣ, ಜೆಡಿಎಸ್ ಇದೆ. ಮೂರು ಚುನಾವಣೆಗಳಲ್ಲಿ ನಿಮ್ಮ ಪರವಾಗಿ ದುಡಿದಿದ್ದೇನೆ, ಒಂದು ರೂಪಾಯಿಗೂ ನಿಮ್ಮ ಬಳಿ ಕೈಚಾಚಿಲ್ಲ. ಇಂತಹ ಮಾತನ್ನು ಆಡಬೇಡಿ, ಮಾತು ವಾಪಸ್ ತೆಗೆದುಕೊಳ್ಳಿ ಎಂದು ಹೇಳಿದೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಗೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಪಕ್ಷದ ವರಿಷ್ಠರು. ಕ್ಷೇತ್ರದಲ್ಲಿ ಪಕ್ಷ ತನ್ನದೇ ರೀತಿಯಲ್ಲಿ ಸಮೀಕ್ಷೆ ನಡೆಸುತ್ತದೆ. ಸಮೀಕ್ಷೆಯ ವರದಿ ಆಧಾರದ ಮೇಲೆ ಟಿಕೆಟ್ ನಿರ್ಧರಿಸಲಾಗುತ್ತದೆ. ನಾನು ಯಾರನ್ನೂ ಓವರ್ ಟೇಕ್ ಮಾಡುತ್ತಿಲ್ಲ. ನೀವೂ ಸೇವೆ ಮಾಡಿ, ನಾನೂ ನನ್ನ ಕೈಲಾದ ಸೇವೆ ಮಾಡುತ್ತೇನೆ. ಕುಮಾರಸ್ವಾಮಿಯವರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ, ಕುಮಾರಣ್ಣನವರು ಎಂ.ಟಿ.ಕೃಷ್ಣಪ್ಪನವರಿಗೆ ಟಿಕೆಟ್ ನೀಡಿದರೆ ಅವರ ಪರವಾಗಿ ಕೆಲಸ ಮಾಡಲು ನಾನು ಸಿದ್ದನಿದ್ದೇನೆ. ಕಾರಣ ನಾನು ಪಕ್ಕಾ ಜೆಡಿಎಸ್ ಕಾರ್ಯಕರ್ತ. ಟಿಕೆಟ್ ಕೇಳಲು ಎಲ್ಲರಿಗೂ ಅವಕಾಶವಿದೆ. ಆದರೆ ಅಂತಿಮವಾಗಿ ಟಿಕೆಟ್ ನೀಡುವವರು ವರಿಷ್ಠರು ಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ವೈದ್ಯ ಡಾ.ನಂಜಪ್ಪ, ನಿವೃತ್ತ ಉಪಪ್ರಾಂಶುಪಾಲ ನಾಗರಾಜಪ್ಪ, ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಲಿಂಗೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಾಘಟ್ಟ ರವಿ, ಮುಖಂಡರಾದ ಕಣತೂರು ರವಿಕುಮಾರ್, ದೊಡ್ಡಾಘಟ್ಟದ ಮಲಸೀಮೆ ಗೋವಿಂದಪ್ಪ, ಧರೀಶ್, ಮಲ್ಲಾಘಟ್ಟ ರಾಜಣ್ಣ, ಜೈಗಿರಿ ಸುಂದರ್, ಯರದೇಹಳ್ಳಿಯ ನಂದೀಶ್, ನವೀನ್, ರಾಜು, ಸುರೇಶ್, ದಂಡಿನಶಿವರ ಗುಡಿಗೌಡರಾದ ಬೋರೇಗೌಡರು, ಮುದ್ದನಹಳ್ಳಿ ಹರೀಶ್, ಕೊಡಗೀಹಳ್ಳಿ ಹಾಲು ಉತ್ಪಾದಕರ ಸಂಘದ ಮಹೇಶ್, ಪ್ರಕಾಶ್, ಕೊಡಗೀಹಳ್ಳಿ ಪಿಎಸಿಬಿ ಅಧ್ಯಕ್ಷ ಯದುಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಜೆಡಿಎಸ್ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಗಿರೀಶ್ ಕೆ ಭಟ್




