ಬೆಳಗಾವಿ: ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ನಯಾನಗರ ಸೇತುವೆ ಬಳಿ ಬುಧವಾರ, ಮಲಪ್ರಭಾ ನದಿ ನೀರಿನಲ್ಲಿ ಮೂರು ಬೈಕುಗಳು ಪತ್ತೆಯಾಗಿವೆ. ಇವುಗಳನ್ನು ಕದ್ದು, ಚಿನ್ನದಂಗಡಿ ದರೋಡೆಗೆ ಬಳಸಿ, ಸಾಕ್ಷ್ಯ ನಾಶಕ್ಕೆ ನದಿಗೆ ಬಿಸಾಕಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
KA25 G-1459, KA24 J-7907 ಎಂಬ ಸಂಖ್ಯೆಯ ಎರಡು ಬೈಕ್ ಹಾಗೂ ನಂಬರ್ ಪ್ಲೇಟ್ ಇಲ್ಲದ ಇನ್ನೊಂದು ಬೈಕ್ ಪತ್ತೆಯಾಗಿದೆ.
ಬುಧವಾರ ನದಿ ಸೇತುವೆ ಮೇಲೆ ಹೊರಟವರಿಗೆ ಇವು ಕಂಡಿವೆ. ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಧಾವಿಸಿ, ಅವುಗಳನ್ನು ಹೊರಕ್ಕೆ ತಂದರು.
ಸವದತ್ತಿ ಪಟ್ಟಣದಲ್ಲಿ 2025ರ ಡಿಸೆಂಬರ್ 22ರಂದು ಚಿನ್ನದ ಅಂಗಡಿ ದರೋಡೆ ಮಾಡಲಾಗಿತ್ತು. ₹12 ಲಕ್ಷ ಮೌಲ್ಯದ ಚಿನ್ನಾಭರಣ ಕದಿಯಲಾಗಿತ್ತು..
ಮೂರು ಬೈಕುಗಳ ಮೇಲೆ ಬಂದಿದ್ದ 9 ಆರೋಪಿಗಳು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಬಹುಶಃ ಈ ಮೂರೂ ಬೈಕುಗಳನ್ನು ಕದ್ದು, ಚಿನ್ನಾಭರಣ ದರೋಡೆಗೆ ಬಳಸಿದ್ದಾರೆ. ಸಾಕ್ಷ್ಯ ನಾಶಕ್ಕಾಗಿ ಮಲಪ್ರಭಾ ನದಿಯಲ್ಲಿ ಎಸೆದು ಹೋದ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.




