ತುರುವೇಕೆರೆ: ತಾಲೂಕಿನ ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿಯ ಆರ್.ನಂಜುಂಡಪ್ಪ ಅವಿರೋಧರಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಯದುಕುಮಾರ್ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುಡ್ಡೇನಹಳ್ಳಿಯ ನಂಜುಂಡಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರಾಗಿ ಗುಡ್ಡೇನಹಳ್ಳಿಯ ನಂಜುಂಡಪ್ಪ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ, ಸಂಘದ ಸಿಇಒ ಬಿ.ಎನ್.ಮಹೇಶ್ವರ್ ಘೋಷಿಸಿದರು.
ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣೆಯಲ್ಲಿ ಸಂಘದ 12 ಸದಸ್ಯರ ಪೈಕಿ ಒಬ್ಬರು ಗೈರಾಗಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ 11 ಮಂದಿ ಸದಸ್ಯರು, ಆರ್ಥಿಕ ಸಲಹೆಗಾರ ಪಾಂಡುರಂಗ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ವರ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾಗಿ ಕೊಟ್ಟೂರನಕೊಟ್ಟಿಗೆಯ ಜಯಲಕ್ಷ್ಮಮ್ಮಗೋವಿಂದರಾಜ್ ಮುಂದುವರೆದಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ ಮಾತನಾಡಿ, ಕೊಡಗೀಹಳ್ಳಿ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಗುಡ್ಡೇನಹಳ್ಳಿ ನಂಜುಂಡಪ್ಪ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಂಘದಲ್ಲಿ ಯಶಸ್ವಿನಿ ಕಾರ್ಡ್ ಮಾಡುತ್ತಿದ್ದು, ಮಾರ್ಚ್ 31 ಕಡೆಯ ದಿನವಾಗಿದೆ. ಸದಸ್ಯರು ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳುವ ಮೂಲಕ ಅದರ ಅನುಕೂಲಗಳನ್ನು ಪಡೆದುಕೊಳ್ಳಬಹುದಾಗಿದೆ. ಸಂಘದಲ್ಲಿ ಸಾಲ ಪಡೆದು ಮರಣ ಹೊಂದಿದ ಷೇರುದಾರರಿಗೆ ಸಂಘದ ವತಿಯಿಂದ 25 ಸಾವಿರ ರೂ ಸಾಲ ಮನ್ನಾ ಮಾಡಲಾಗುತ್ತಿದ್ದು, ಮಾರ್ಚ್ 15 ಕಡೆಯ ದಿನಾಂಕವಾಗಿದೆ. ಸಾಲ ಪಡೆದು ಮರಣ ಹೊಂದಿದ ರೈತರ ಕುಟುಂಬದವರು ಸಂಘಕ್ಕೆ ಬಂದು ತಮ್ಮ ಸಾಲದ ಬಗ್ಗೆ ಮಾಹಿತಿ ಪಡೆದು ಸಾಲಮನ್ನಾ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳಬೇಕು. ಸಾಲ ಮನ್ನಾ ಯೋಜನೆಯು ನಮ್ಮ ಸಹಕಾರ ಸಂಘದ ಜಿಲ್ಲಾಧ್ಯಕ್ಷರೂ, ಮಾಜಿ ಸಚಿವರಾದ ಕೆ.ಎನ್.ರಾಜಣ್ಣನವರು ರೈತರಿಗಾಗಿ ರೂಪಿಸಿರುವ ಯೋಜನೆಯಾಗಿದೆ ಎಂದರು.
ನೂತನ ಅಧ್ಯಕ್ಷ ಗುಡ್ಡೇನಹಳ್ಳಿ ನಂಜುಂಡಪ್ಪ ಮಾತನಾಡಿ, ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ ಎಲ್ಲಾ ನಿರ್ದೇಶಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸಂಘದ ಸರ್ವತೋಮುಖ ಅಭಿವೃದ್ದಿಯಲ್ಲಿ ಮಾಜಿ ಸಚಿವ ಕೆ.ಎನ್.ರಾಜಣ್ಣನವರು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿದ್ದಲಿಂಗಪ್ಪನವರ ಪಾತ್ರ ಮಹತ್ವದ್ದಾಗಿದೆ. ಸಂಘದ ಅಧ್ಯಕ್ಷನಾಗಿ ಸಂಘವನ್ನು ಮತ್ತಷ್ಟು ಅಭಿವೃದ್ದಿಯತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದರು.
ನೂತನ ಅಧ್ಯಕ್ಷರನ್ನು ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಬೆಸ್ಕಾಂ ಮಾಜಿ ನಿರ್ದೇಶಕರ ಬಿ.ಎಸ್. ವಸಂತಕುಮಾರ್, ಜಿಪಂ ಮಾಜಿ ಸದಸ್ಯ ಎನ್.ಆರ್.ಜಯರಾಮ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಉಗ್ರೇಗೌಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ದೇವರಾಜ್, ಪ್ರಸನ್ನ ಕುಮಾರ್, ಪಪಂ ಮಾಜಿ ಸದಸ್ಯ ರುದ್ರೇಶ್, ಮುಖಂಡರಾದ ವಿ.ಟಿ.ವೆಂಕಟರಾಮಯ್ಯ, ಹಾವಾಳ ಶೇಷೇಗೌಡ, ಜೋಗಿಪಾಳ್ಯ ಶಿವರಾಜ್, ಟಿ.ಎನ್.ಶಶಿಶೇಖರ್, ಟಿ.ಎನ್.ಶಿವರಾಜ್, ಕೆ.ಟಿ. ಗೋವಿಂದ ರಾಜು, ವೇಣುಗೋಪಾಲ್, ಸಂಘದ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಸಂಘದ ನಿರ್ದೇಶಕರಾದ ಯದುಕುಮಾರ್, ಸಿದ್ದಲಿಂಗಪ್ಪ, ದೇವರಾಜು, ಪುಟ್ಟಸ್ವಾಮಿಗೌಡ, ಶರತ್ ಕುಮಾರ್, ಮುನಿರಾಜು, ಚಿಕ್ಕಹನುಮಯ್ಯ, ಮಂಜಮ್ಮ, ವೆಂಕಟೇಶ್ ಸೇರಿದಂತೆ ನೂರಾರು ಅಭಿಮಾನಿಗಳು, ಬೆಂಬಲಿಗರು ಅಭಿನಂದನೆ ಸಲ್ಲಿಸಿದರು.
ವರದಿ: ಗಿರೀಶ್ ಕೆ ಭಟ್




