ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(BNP) ಅಧ್ಯಕ್ಷ ತಾರಿಕ್ ರೆಹಮಾನ್(60) ಅವರು ಮಂಗಳವಾರ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇತ್ತೀಚಿಗೆ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಎನ್ ಪಿ ಸರ್ಕಾರ ರಚನೆಗೆ ಸಿದ್ಧತೆಗಳನ್ನು ಭರದಿಂದ ಆರಂಭಿಸಿದೆ.
ಈ ಬಾರಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ದೀರ್ಘಕಾಲದ ಸಂಪ್ರದಾಯವನ್ನು ಮುರಿದು ಬಂಗಭಬನ್ ಬದಲಿಗೆ ಸಂಸತ್ ಸಂಕೀರ್ಣದ ದಕ್ಷಿಣ ಪ್ಲಾಜಾದಲ್ಲಿ ನಡೆಸಲಾಗುತ್ತಿದೆ.
ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಜಾತಿಯಾ ಸಂಗ್ಸದ್ನ ದಕ್ಷಿಣ ಪ್ಲಾಜಾದಲ್ಲಿ ಹೊಸ ಸಂಪುಟ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
“ಸಂಸದೀಯ ಸಚಿವಾಲಯವು ನಾಳೆ ಸಂಜೆ 4:00 ಗಂಟೆಗೆ ಹೊಸ ಸಂಪುಟ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನಡೆಸಲಿದೆ. ಇದಕ್ಕೂ ಮೊದಲು, ಸಂಸತ್ ಸದಸ್ಯರು(ಸಂಸದರು) ಬೆಳಗ್ಗೆ 10:00 ಗಂಟೆಗೆ ಜಾತಿಯಾ ಸಂಗ್ಸದ್ ಸಂಕೀರ್ಣದ ದಕ್ಷಿಣ ಪ್ಲಾಜಾದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ” ಎಂದು ಜಾತಿಯಾ ಸಂಗ್ಸದ್ ಸಚಿವಾಲಯದ ಕಾರ್ಯದರ್ಶಿ ಕನಿಜ್ ಮೌಲಾ ಬಿಎಸ್ಎಸ್ಗೆ ತಿಳಿಸಿದ್ದಾರೆ.




