ಬೆಳಗಾವಿ: ಅಕ್ಕಪಡೆ ಮಹಿಳೆಯರ ಶಕ್ತಿ, ಮಹಿಳೆಯರ ಸ್ವಾಭಿಮಾನದ ಪ್ರತೀಕ, ಶೀಘ್ರವೇ ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ನಗರದ ಹೃದಯ ಭಾಗ ಕಿತ್ತೂರು ಚೆನ್ನಮ್ಮ ಸರ್ಕಲ್‌ನಲ್ಲಿ ಅಕ್ಕಪಡೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸದ್ಯಕ್ಕೆ ಪ್ರಾಯೋಗಿಕವಾಗಿ ಕೆಲವು ಸ್ಥಳಗಳಲ್ಲಿ ಅಕ್ಕಪಡೆ ಆರಂಭಿಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಮುಂಬರುವ ಬಜೆಟ್‌ನಲ್ಲಿ ಅಂಗೀಕಾರ ಪಡೆದು ತಾಲೂಕು ಮಟ್ಟಕ್ಕೂ ಅಕ್ಕಪಡೆ ವಿಸ್ತರಿಸಲಾಗುವುದು ಎಂದರು.
ಅಕ್ಕಪಡೆ ಎಂದರೆ ಮಹಿಳೆಯರಿಗೆ ಹಾಗೂ ಮಕ್ಕಳ ಪಾಲಿಗೆ ಭರವಸೆ ಇದ್ದಂತೆ. ಜಿಲ್ಲೆಯಾದ್ಯಂತ ಮಹಿಳೆಯರು, ಮಕ್ಕಳು ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಅದರ ಮುಂದುವರಿದ ಭಾಗವಾಗಿ ಅಕ್ಕಪಡೆಯನ್ನು ರಚಿಸಲಾಗಿದೆ ಎಂದು ಸಚಿವರು ಹೇಳಿದರು.
ಅಕ್ಕಪಡೆ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಾದ ಮಾಲ್, ಜಾತ್ರಾ ಮಹೋತ್ಸವ, ಲೇಡಿಸ್ ಹಾಸ್ಟೆಲ್‌ಗಳು, ಕಾಲೇಜುಗಳು, ಸಮುದಾಯ ಭವನ ಸೇರಿದಂತೆ ಜನನಿಬೀಡ ಪ್ರದೇಶಗಳಿಗೆ ಭೇಟಿ ಕೊಡಲಿದ್ದಾರೆ. ಅಕ್ಕಪಡೆಯ ಉದ್ದೇಶ ಸಫಲವಾಗಬೇಕು ಎಂದರೆ ನಾಗರಿಕ ಸಮಾಜ ಕೂಡ ಇದಕ್ಕೆ ಬೆಂಬಲ ನೀಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.




