Ad imageAd image

ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷರಾಗಿ ಪ್ರಸನ್ನಕುಮಾರ್ ಅಧಿಕಾರ ಸ್ವೀಕಾರ

Bharath Vaibhav
ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷರಾಗಿ ಪ್ರಸನ್ನಕುಮಾರ್ ಅಧಿಕಾರ ಸ್ವೀಕಾರ
WhatsApp Group Join Now
Telegram Group Join Now

ತುರುವೇಕೆರೆ : ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಸಮಿತಿಯ ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿಯ ಪ್ರಸನ್ನಕುಮಾರ್ ಅವರನ್ನು ಸರ್ಕಾರ ನೇಮಿಸಿದ್ದು, ಇಂದು ತಾಲ್ಲೂಕು ಪಂಚಾಯ್ತಿ ಕಛೇರಿಯ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು.

ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ತುರುವೇಕೆರೆ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿರುವ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಹಿಂದೆ ಸರ್ಕಾರ ಸಮಿತಿ ರಚನೆ ಸಂದರ್ಭದಲ್ಲೂ ನನ್ನನ್ನು ಸಮಿತಿಯ ತಾಲೂಕು ಅಧ್ಯಕ್ಷನಾಗಿ ನೇಮಿಸಿತ್ತು. ಆದರೆ ಕಾರಣಾಂತರದಿಂದ ಸ್ವಲ್ಪ ವ್ಯತ್ಯಾಸವಾಗಿತ್ತು. ಈಗ ಮತ್ತೊಮ್ಮೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಿದೆ. ಸರ್ಕಾರ ನನ್ನ ಮೇಲಿಟ್ಟ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಹಾಗೂ ಯೋಜನೆಯ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ ಎಂದರು.

ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿಯ ಸದಸ್ಯರಾಗಿ ಕೃಷ್ಣಪ್ಪ, ಸವಿತ, ಬಿ.ಎಸ್.ಬಸವರಾಜು, ದೇವರಾಜು, ಗವಿರಂಗಪ್ಪ, ಲಕ್ಷ್ಮೀದೇವಮ್ಮ, ಶಿವರಾಜು, ಕೀರ್ತಿರಾಜ್, ತ್ರಿಜಯ್, ನಾರಾಯಣಗೌಡ, ಜವರೇಗೌಡ, ಎ.ಎಂ.ಪ್ರಕಾಶ್, ಪುರುಷೋತ್ತಮ್, ಅಫ್ಜಲ್, ಸದಸ್ಯ ಕಾರ್ಯದರ್ಶಿಯಾಗಿ ತಾಪಂ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದರು.

ಗ್ಯಾರಂಟಿ ಅನುಷ್ಟಾನ ಸಮಿತಿಯ ನೂತನ ಅಧ್ಯಕ್ಷ ಪ್ರಸನ್ನಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಪ್ರತಿಯೊಬ್ಬ ಬಡವರು, ಕೂಲಿಕಾರ್ಮಿಕರು, ಮಧ್ಯಮ ವರ್ಗದ ಜನರ ಜೀವನಮಟ್ಟವನ್ನು ಸುಧಾರಿಸಿದೆ. ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ವಿದ್ಯಾನಿಧಿ, ಶಕ್ತಿ ಯೋಜನೆ ಎಂಬ ಪಂಚ ಗ್ಯಾರಂಟಿಗಳು ರಾಜ್ಯದ ಪ್ರತಿಯೊಬ್ಬ ನಾಗರೀಕರಿಗೂ ಅನುಕೂಲವಾಗುವಂತಹ ಜನಪರ ಕಾರ್ಯಕ್ರಮಗಳಾಗಿದೆ ಎಂದ ಅವರು, ಗ್ಯಾರಂಟಿ ಯೋಜನೆಗಳನ್ನು ಪ್ರತಿಪಕ್ಷಗಳು ಟೀಕಿಸಿದ್ದವು, ಸರ್ಕಾರದ ಗ್ಯಾರಂಟಿ ಯೋಜನೆ ಫಲ ನೀಡುವುದಿಲ್ಲ ಎಂದೆಲ್ಲಾ ವ್ಯಂಗ್ಯವಾಡಿದ್ದವು. ಆದರೆ ಪ್ರತಿಪಕ್ಷಗಳೇ ಬೇರೆ ರಾಜ್ಯಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯನ್ನು ಮಾದರಿಯನ್ನಾಗಿ ಮಾಡಿಕೊಂಡು ಚುನಾವಣೆಯಲ್ಲಿ ಭರವಸೆ ನೀಡಿದ ಉದಾಹರಣೆ ಕಣ್ಮುಂದಿದೆ ಎಂದರು.

ಗ್ಯಾರಂಟಿ ಅನುಷ್ಟಾನ ಸಮಿತಿಯ ನೂತನ ಅಧ್ಯಕ್ಷ ಪ್ರಸನ್ನಕುಮಾರ್ ಅವರನ್ನು ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್, ಪಿಎಸಿಬಿ ಅಧ್ಯಕ್ಷ ನಂಜುಂಡಪ್ಪ, ಜಿಪಂ ಮಾಜಿ ಸದಸ್ಯ ಎನ್.ಆರ್.ಜಯರಾಮ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಮುಖಂಡರಾದ ರುದ್ರೇಶ್, ಜೈಗಿರಿಸುಂದರ್, ಟಿ.ಎನ್.ಶಶಿಶೇಖರ್, ಕೊಂಡಜ್ಜಿ ಕುಮಾರ್, ಲಕ್ಷ್ಮೀದೇವಮ್ಮ, ಡಿ.ಪಿ.ರಾಜು, ಲಕ್ಷ್ಮಣ್ ಸೇರಿದಂತೆ ನೂರಾರು ಮಂದಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಅಭಿನಂದಿಸಿದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!